

ಗಂಗಾವತಿ: ಸೇವಾಭದ್ರತೆ ಒದಗಿಸುವಂತೆ ಒತ್ತಾಯಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಘಟಕದ ಸದಸ್ಯರು ನಗರದ ಉಪವಿಭಗ ಆಸ್ಪತ್ರೆ ಮುಂದೆ ಗುರುವಾರ ಎಐಯುಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆರೋಗ್ಯಾಧಿಕಾರಿ ಡಾ. ಗೌರಿಶಂಕರ ಚಿತ್ರಿಕಿಗೆ ಮನವಿ ಸಲ್ಲಿಸಿದರು.
ಸಂಘದ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಆಚಾರ್ಯ ಮಾತನಾಡಿ, ಆರೋಗ್ಯ ಇಲಾಖೆ ಯೋಜನೆಗಳನ್ನು ಜನರಿಗೆ ತಲುಪಿಸುವುದರ ಜತೆಗೆ ವಿವಿಧ ಇಲಾಖೆ ಸರ್ವೇ ಕಾರ್ಯದಲ್ಲೂ ತೊಡಗಿಸಿಕೊಂಡ ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರ ಆರೋಗ್ಯದ ಕಾಳಜಿವಹಿಸಿದ್ದಾರೆ. ಸೇವಾ ಭದ್ರತೆ, ಪ್ರೋತ್ಸಾಹಧನ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಜ.7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಲಿದ್ದು, ಸೇವೆ ಸ್ಥಗಿತ ಹೋರಾಟ ನಡೆಯಲಿದೆ ಎಂದರು.
ತಾಲೂಕಾಧ್ಯಕ್ಷೆ ಜ್ಯೋತಿಲಕ್ಷ್ಮೀ, ಪದಾಧಿಕಾರಿಗಳಾದ ಲಾಲಬೀ, ಸಂಗೀತಾನಾಯ್ಕ, ರೇಖಾ, ಲಲಿತಾ ಹಿರೇಮಠ, ರೇಣುಕಾ, ಉಮಾದೇವಿ, ದೀಪಾ, ಈರಮ್ಮ, ಅನುರಾಧಾ, ಮಹಾದೇವಮ್ಮ, ಲಕ್ಷ್ಮಿ, ಕೀರ್ತನಾ, ಎಂ.ಲಿಲಾವತಿ, ವಿಶಾಲಾಕ್ಷಿ, ಮಲ್ಲಿಕಾ ಇತರರಿದ್ದರು.