

ಗಂಗಾವತಿ: ನಗರಕ್ಕೆ ಹೊಂದಿಕೊಂಡ ಬೆಟ್ಟದ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೋಮವಾರ ಬಿದ್ದಿದ್ದು, ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ.
ನಗರದ ಜಯನಗರ, ನಂದಿ ಬಡಾವಣೆಯ ಬೆಟ್ಟ ಪ್ರದೇಶದಲ್ಲಿ ಬೆಳಗಿನ ಜಾವ ಚಿರತೆ ಕಾಣಿಸಿಕೊಳ್ಳುತ್ತಿದ್ದು, ನಿವಾಸಿಗಳು ಮತ್ತು ವಾಯುವಿಹಾರಿಗಳು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ನಂದಿ ಬಡಾವಣೆ ಸಮೀಪದ ಬೆಟ್ಟದ ಪ್ರದೇಶದಲ್ಲಿ ಬೋನಿಟ್ಟಿದ್ದರು. ಇದರಲ್ಲಿ ಸೆರೆಯಾಗಿರುವ 2 ವರ್ಷದ ಗಂಡು ಚಿರತೆ ಆರೋಗ್ಯವಾಗಿದ್ದು, ಬೋನಿಗೆ ಬಿದ್ದಾಗ ತಪ್ಪಿಸಿಕೊಳ್ಳಲೆತ್ನಿಸುವ ಸಂದರ್ಭದಲ್ಲಿ ಮೂಗಿನ ಬಳಿ ಗಾಯ ಮಾಡಿಕೊಂಡಿದೆ.
ಸೆರೆ ಸಿಕ್ಕ ಚಿರತೆ ನೋಡಲು ನಗರದ ಜನತೆ ಜಮಾಯಿಸಿದ್ದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ಅರಣ್ಯ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ. ಕಳೆದ 4 ವರ್ಷಗಳಲ್ಲಿ ಇದೇ ಪ್ರದೇಶದಲ್ಲಿ 3 ಚಿರತೆಯನ್ನು ಸೆರೆಹಿಡಿಯಲಾಗಿದೆ.
ತಾಲೂಕು ಅರಣ್ಯ ಸಂರಕ್ಷಕ ಸುಭಾಷ್‌ಚಂದ್ರ ನಾಯಕ ಮಾತನಾಡಿ, ಅಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಗಂಡು ಚಿರತೆ ಸೆರೆಹಿಡಿಯಲಾಗಿದ್ದು, ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದರು.