

ಗಂಗಾವತಿ: ಒಳ ಮೀಸಲಿಗಾಗಿ ಸದಾಶಿವ ವರದಿ ಜಾರಿ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣದ ತಾಲೂಕು ಘಟಕದ ಸದಸ್ಯರು ನಗರದ ಅಂಚೆ ಇಲಾಖೆ ಮುಂದೆ ಶನಿವಾರ ಪತ್ರ ಚಳವಳಿ ನಡೆಸಿದರು.
ಗ್ರಾಮೀಣ ಭಾಗದ ಸದಸ್ಯರೊಂದಿಗೆ ಅಂಚೆ ಇಲಾಖೆ ಮುಂದಿನ ಪೋಸ್ಟ್ ಬಾಕ್ಸ್‌ನಲ್ಲಿ ಸಿಎಂಗೆ ಬರೆದ ಪತ್ರ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಸಮಿತಿ ಕಕ ವಿಭಾಗದ ಸಂಚಾಲಕ ಹಂಪೇಶ ಜಿ.ಹರಿಗೋಲ್ ಮಾತನಾಡಿ, ಒಳಮೀಸಲಿಗೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಸ್ಪಂದಿಸುತ್ತಿಲ್ಲ. ಸದಾಶಿವ ವರದಿ ಜಾರಿಗೆ ಕೋರ್ಟ್ ತಿಳಿಸಿದರೂ ಜನಪ್ರತಿನಿಧಿಗಳು ಆಸಕ್ತಿವಹಿಸುತ್ತಿಲ್ಲ. ಅದರಂತೆ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ನಿಯಂತ್ರಣವಿಲ್ಲದಂತಾಗಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸುವುದರ ಜತೆಗೆ ದೌರ್ಜನ್ಯಕ್ಕೊಳಪಡುವ ಕುಟುಂಬಗಳಿಗೆ ಪರಿಹಾರದ ಜತೆಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಗೋವಿಂದಪ್ಪ ಗದ್ವಾಲ್, ಬೆಟ್ಟಪ್ಪ ಹಿರೇಕುರುಬರ್ ಇತರರಿದ್ದರು.