

ಗಂಗಾವತಿ : ಪ್ರತಿಭೆಗಳನ್ನು ಪರಿಚಯಿಸಲು ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಂಗೀತದತ್ತ ಆಸಕ್ತಿ ಹೆಚ್ಚಿಸಲಾಗುತ್ತಿದೆ ಎಂದು ಚಲನಚಿತ್ರ ಹಿನ್ನೆಲೆ ವಾದ್ಯಗಾರ ಮತ್ತು ಹಿರಿಯ ಗಾಯಕ ಜೆ.ಎಂ. ಜಗನ್ನಾಥ ಹೇಳಿದರು.
ನಗರದ ಶ್ರೀ ಕೊಟ್ಟೂರುಬಸವೇಶ್ವರ ವೇದಿಕೆಯಿಂದ ಹವ್ಯಾಸಿ ಗಾಯಕರಿಂದ ಶನಿವಾರ ಹಮ್ಮಿಕೊಂಡಿದ್ದ ಸಂಗೀತ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಭಾಗದಲ್ಲಿ ಹಲವು ಸಂಗೀತ ಪ್ರತಿಭಾವಂತರಿದ್ದಾರೆ. ಆದರೆ ಪ್ರೋತ್ಸಾಹದ ಕೊರತೆಯಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಅಂತಹವರಿಗಾಗಿ ಕರೋಕೆ ಕಾರ್ಯಕ್ರಮಗಳು ಸ್ಫೂರ್ತಿ ತುಂಬುತ್ತಿದ್ದು, ಪ್ರತಿಭೆಗಳ ಪ್ರೋತ್ಸಾಹಕ್ಕೆ ವೇದಿಕೆಯಾಗಿದೆ. ಹಾಡುಗಳ ಆಯ್ಕೆ ಜತೆಗೆ ಸಾಹಿತ್ಯ ಉಚ್ಛಾರದ ವಿಷಯದಲ್ಲಿ ಹೊಸ ಪ್ರತಿಭೆಗಳು ಹೊಸತನವನ್ನು ರೂಢಿಸಿಕೊಳ್ಳಬೇಕಿದೆ ಎಂದರು.
30ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು ಗಾಯನ ಕೇಳುಗರ ಮೆಚ್ಚುಗೆ ಗಳಿಸಿತು. ಕೆಲವರ ಗಾಯನ ಚಲನಚಿತ್ರ ಗಾಯಕರನ್ನು ಮೀರಿಸುವಂತಿತ್ತು. ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ, ಕೊಟ್ಟೂರು ಬಸವೇಶ್ವರ ದೇವಾಲಯದ ಹಿರಿಯ ಸದಸ್ಯ ಹೊಸಳ್ಳಿಶಂಕರಗೌಡ, ಮಾಧ್ಯಮ ಅಕಾಡಮಿ ಸದಸ್ಯ ಕೆ.ನಿಂಗಜ್ಜ, ಧೀರ ಕರವೇ ರಾಜ್ಯಾಧ್ಯಕ್ಷ ವಿರೂಪಾಕ್ಷಿಗೌಡ ನಾಯಕ, ಕಲಾವಿದರಾದ ಪರಶುರಾಂ, ಖಾಜಾವಲಿ, ವೀಣಾಮದ್ಗಲ್ ಇತರರಿದ್ದರು.