

ಗಂಗಾವತಿ: ಗಂಗಾವತಿ ಮತ್ತು ಬಳ್ಳಾರಿ ಜಿಲ್ಲೆ ಸಂಪರ್ಕಿಸುವ ರೈಲು ಮಾರ್ಗದ ಕಾಮಗಾರಿ ಆರಂಭಕ್ಕೆ ರಾಜ್ಯದ ಪಾಲಿನ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆಯ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಗೆ ಶುಕ್ರವಾರ ಮನವಿ ಮಾಡಿದರು.
ಸಚಿವರನ್ನು ಕಾರಟಗಿ ಗೃಹ ಕಚೇರಿಯಲ್ಲಿ ಭೇಟಿಯಾದ ಸದಸ್ಯರು, ಗಂಗಾವತಿ-ದರೋಜಿ ಮಾರ್ಗದ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಶ್ರಮಿಸುವಂತೆ ಒತ್ತಾಯಿಸಿದರು. ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಜಿಲ್ಲಾಧ್ಯಕ್ಷ ಆಶೋಕ ಸ್ವಾಮಿ ಹೇರೂರು, ರೈಲ್ವೆ ಇಲಾಖೆಯ ಸರ್ವೇ ಪ್ರಕಾರ ಗಂಗಾವತಿ-ದರೋಜಿ ಮಾರ್ಗ 31.30 ಕಿ.ಮಿ. ಅಂತರವಿದ್ದು, ಅಂದಾಜು 919.49 ಕೋಟಿ ರೂ. ನಿಗದಿಪಡಿಸಲಾಗಿದೆ. ರೈಲು ಮಾರ್ಗ ಆರಂಭವಾದರೆ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೆ ಸಂಪರ್ಕಿಸಲು ಸಹಕಾರಿಯಾಗಲಿದ್ದು, ಧಾರ್ಮಿಕ ಕೇಂದ್ರಗಳಾದ ಶ್ರೀಶೈಲ, ತಿರುಪತಿ ಸಂಪರ್ಕಕ್ಕೆ ಅನುಕೂಲವಾಗಲಿದೆ.
ಬಳ್ಳಾರಿ, ಗುಂತಕಲ್, ಗುಂಟೂರು ರೈಲ್ವೆ ಜಂಕ್ಷನ್‌ಗಳನ್ನು ಉದ್ದೇಶಿತ ಮಾರ್ಗ ಸಂಪರ್ಕಿಸುವುದರಿಂದ ಬೆಂಗಳೂರು, ಚನ್ನೈ ಇತರ ನಗರಗಳಿಗೆ ಪ್ರಯಾಣಿಸಲು ಸರಳವಾಗಲಿದೆ. ಗಂಗಾವತಿ-ದರೋಜಿ ರೈಲು ಮಾರ್ಗದ ಕಾಮಗಾರಿ ಕೂಡಲೇ ಆರಂಭಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುಬೇಕಿದೆ. ಗಂಗಾವತಿ-ಬಾಗಲಕೋಟೆ ರೈಲು ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು, ರಾಜ್ಯದ ಪಾಲಿನ ಅನುದಾನ ನೀಡುವಂತೆ ಒತ್ತಾಯಿಸಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ನಿರ್ದೇಶಕ ಶರಣೇಗೌಡ ಮಾ.ಪಾಟೀಲ್, ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ ಇತರರಿದ್ದರು.