

ಗಂಗಾವತಿ: ಇತರೆ ಸಮುದಾಯದೊಂದಿಗೆ ಉತ್ತಮ ಬಾಂಧವ್ಯಹೊಂದಿದ ಬಣಜಿಗ ಸಮಾಜ, ರಾಜ್ಯವನ್ನಾಳಿದ ಹೆಮ್ಮೆಯಿದೆ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು. ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾಪುರಸ್ಕಾರ ಮತ್ತು ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಯಕವೇ ಕೈಲಾಸ ತತ್ವ ಅಳವಡಿಸಿಕೊಂಡ ಶ್ರೇಷ್ಠ ಸಮಾಜವಾಗಿದ್ದು, ಗ್ರಾಮೀಣ ಭಾಗದಲ್ಲಿನ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಪ್ರತಿಷ್ಠಿತ ಸಂಸ್ಥೆಗಳು ಸಮಾಜದಿಂದಲೇ ಅಸ್ತಿತ್ವಕ್ಕೆ ಬಂದಿವೆ. ಸಮಾಜವನ್ನು ಒಗ್ಗೂಡಿಸುವುದರ ಜತೆಗೆ ಸಂಘಟನೆ ಬಲಿಷ್ಠಗೊಳಿಸಬೇಕಿದೆ. ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಒದಗಿಸಬೇಕಿದ್ದು, ಕ್ರೀಯಾಶೀಲ ಚಟುವಟಿಕೆ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಅಂದಪ್ಪ ಗವಿಯಪ್ಪ ಜವಳಿ ಮಾತನಾಡಿ, ಸಮಾಜದ ಭವನ ನಿರ್ಮಾಣಕ್ಕೆ ಈಗಾಗಲೇ 1.12 ಎಕರೆ ಭೂಮಿ ಖರೀದಿಸಿದ್ದು, 2.50 ಕೋ.ರೂ.ಸಂಗ್ರಹಿಸಲಾಗಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸಮುದಾಯದ ಜನರಲ್ಲಿ ಸಂಸ್ಕಾರ ನೀಡುವ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿ ನಿಧಿ ಸ್ಥಾಪನೆ ಮೂಲಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು. ವೃತ್ತಿ ಜತೆಗೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಿ. ಅಂಕ ಗಳಿಸುವುದರ ಜತೆಗೆ ಸಂಸ್ಕಾರ ಪಡೆಯುವಂತೆ ಸಲಹೆ ನೀಡಿದರು.
ಬಣಜಿಗ ಸಮಾಜದ ಕುರಿತು ಧಾರವಾಡದ ರುದ್ರಣ್ಣ ಹೊಸ್ಕೇರಿ, ಬೈಲಹೊಂಗಲದ ಪ್ರೇಮಕ್ಕ ಅಂಗಡಿ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಸಿಬಿಎಸ್ ಬ್ಯಾಂಕ್ ಸಿಇಒ ಸಿ.ಜಿ.ಜವಳಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ, ತಾಲೂಕು ಅಧ್ಯಕ್ಷ ಸೋಮನಾಥ ಪಟ್ಟಣಶೆಟ್ಟಿ, ಪದಾಧಿಕಾರಿಗಳಾದ ಅರ್ಲೂರ ಶಿವಕುಮಾರ, ಸಂಗಮೇಶ ಕೋಟಿ, ಶಿವಲಿಂಗ ಎಸ್.ಹಲ್ಕುರ್ಕಿ ಸುಮಾ ಎಂ.ಮಸ್ಕಿ, ರೇಖಾ ಶ. ಅಂಗಡಿ, ಶರಣಪ್ಪ ಭತ್ತದ, ಬಸವರಾಜ ಯಲಬುರ್ಗಾ, ಬೆನಕನಾಳ ಲಿಂಗಪ್ಪ, ಡಾ.ವಿ.ವಿ.ಚಿನಿವಾಲರ್, ಗಾಳಿ ರುದ್ರಪ್ಪ, ವೀರಣ್ಣ ಬುಳ್ಳಾ ಇತರರಿದ್ದರು. ಶಿಕ್ಷಕ ಪೂಲಭಾವಿ ಸಿದ್ದಲಿಂಗೇಶ ನಿರ್ವಹಿಸಿದರು.