

ಗಂಗಾವತಿ: ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಎಸ್ಟಿ ಮೀಸಲಿನ ಅಗತ್ಯವಿದ್ದು, ಈ ಬಗ್ಗೆ ವಿಸ್ತೃತ ಹೋರಾಟದ ಅಗತ್ಯವಿದೆ ಎಂದು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಅಧ್ಯಕ್ಷ ವಿನಾಯಕ ಚೊಳಚಗುಡ್ಡ ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಉಳ್ಳಿಡಗ್ಗಿ ಶ್ರೀ ಬನ್ನಿಮಹಾಂಕಾಳಿ ದೇವಾಲಯದಲ್ಲಿ ವಿಶ್ವಕರ್ಮ ಸಮಾಜದಿಂದ ಭಾನುವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಕುಲಕಸಬಿನೊಂದಿಗೆ ವಿಶ್ವಕರ್ಮ ಸಮುದಾಯ ಸ್ವಾಭಿಮಾನದ ಬದುಕು ನಡೆಸುತ್ತಿದ್ದು, ಮೀಸಲು ಸೌಲಭ್ಯದ ಕೊರತೆಯಿಂದ ಹಕ್ಕುಗಳು ದೊರೆಯುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಎಸ್ಟಿ ಮೀಸಲಿನ ಅಗತ್ಯವಿದ್ದು, ಈ ಬಗ್ಗೆ ಸಮಾಜದ ಹೋರಾಟಕ್ಕೆ ಮುಂದಾಗಿದೆ. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮೀಸಲು ಕುರಿತು ಚರ್ಚೆಯಾಗಬೇಕಿದೆ ಎಂದರು.
ಸಮಿತಿ ಕಾರ್ಯದರ್ಶಿ ಮಹೇಶ ಪತ್ತಾರ್ ಮಾತನಾಡಿ, ವಿಶ್ವಕರ್ಮ, ಜಕಣಾಚಾರಿ ಜಯಂತಿಯನ್ನು ಒಗ್ಗಟ್ಟಿನಿಂದ ಅಚರಿಸಬೇಕಿದ್ದು, ಸಮುದಾಯದ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ದೇವಾಲಯದ ಅರ್ಚಕ ದೇವೇಂದ್ರಪ್ಪ ಬಡಿಗೇರ್, ಪದಾಧಿಕಾರಿಗಳಾದ ಬಿ.ಆರ್. ಬಡಿಗೇರ್, ವಿರೂಪಾಕ್ಷಾಚಾರ್, ಪ್ರಭಾಕರ ಪತ್ತಾರ್, ಸತ್ಯನಾರಾಯಣ ಬಡಿಗೇರ್, ರುದ್ರೇಶ, ಚಿದಾನಂದ, ದೊಡ್ಡಬಸವ ಪತ್ತಾರ್, ಪಂಪಾಪತಿ, ವೀರೇಶ, ನಾಗಲಿಂಗಪತ್ತಾರ್, ಸಿದ್ದಲಿಂಗೇಶ ಬಡಿಗೇರ್ ಇತರರಿದ್ದರು.