

ಗಂಗಾವತಿ: ನಗರದ 23ನೇ ವಾರ್ಡ್ ಡಾ.ಅಂಬೇಡ್ಕರ್ ನಗರಕ್ಕೆ ಸಮರ್ಪಕವಾಗಿ ಕುಡಿವ ನೀರು ಪೂರೈಸುವಂತೆ ಒತ್ತಾಯಿಸಿ ಜಿಲ್ಲಾ ದಲಿತ ಮಹಾಸಭಾ ಪದಾಧಿಕಾರಿಗಳು ಸೋಮವಾರ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತಕುಮಾರ ಮಾತನಾಡಿ, ಡಾ.ಅಂಬೇಡ್ಕರ್ ನಗರದಲ್ಲಿ ನಗರಸಭೆಯಿಂದ ಪೂರೈಸುವ ನೀರು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಜನರಿಗೆ ಸಾಲುತ್ತಿಲ್ಲ. 24/7 ಕುಡಿವ ನೀರಿನ ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆಯಾಗಿದೆ. ಈ ಬಗ್ಗೆ ನಗರಸಭೆ ಸಿಬ್ಬಂದಿಯನ್ನು ವಿಚಾರಿಸಿದರೆ ಉಡಾೆಯಿಂದ ವರ್ತಿಸುತ್ತಿದ್ದು, ನೀರಿಗಾಗಿ ಬೇರೆ ವಾರ್ಡ್‌ಗೆ ಹೋಗುವ ಪರಿಸ್ಥಿತಿ ಬಂದಿದೆ. ನಗರಾಡಳಿತದ ಸದಸ್ಯರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಕೂಡಲೇ ಸಮರ್ಪಕ ನೀರು ಪೂರೈಕೆಗೆ ಕ್ರಮವಹಿಸಬೇಕು. ನಿರ್ಲಕ್ಷಿಸಿದರೆ ಖಾಲಿ ಕೊಡಗಳೊಂದಿಗೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವ್ಯವಸ್ಥಾಪಕ ಷಣ್ಮುಖಪ್ಪಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಮಲ್ಲೇಶ, ಚೇತನಕುಮಾರ, ಪರಶುರಾಮ, ರಾಜು, ಮಹಾಂತೇಶ, ಮುಖಂಡರಾದ ಹುಸೇನಪ್ಪ ಹಂಚಿನಾಳ್, ಚನ್ನಬಸವ ಮಾನ್ವಿ ಇತರರಿದ್ದರು.