

ಗಂಗಾವತಿ: ಜಿಲ್ಲಾ ಕಾರಾಗೃಹದಿಂದ 14 ವರ್ಷಗಳ ಹಿಂದೆ ಪರಾರಿಯಾಗಿದ್ದ ಅಬೀದ್‌ಖಾನ್ ಅಲಿಯಾಸ್ ಸಲ್ಮಾನ್‌ಖಾನ್‌ನನ್ನು ನಗರ ಪೊಲೀಸ್ ಅಧಿಕಾರಿಗಳ ತಂಡ ಉತ್ತರ ಪ್ರದೇಶದಲ್ಲಿ ಪತ್ತೆ ಹಚ್ಚಿ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ.
2010ರಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಅಬೀದ್ ಖಾನ್‌ನನ್ನು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದು, ಪತ್ತೆಗಾಗಿ ನಗರ ಪಿಐ ಪ್ರಕಾಶ ಮಾಳೆ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿದ ತಂಡ, ಉತ್ತರ ಪ್ರದೇಶದ ರಾಯಬರೇಲಿಯ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಗ್ಗೆ ಖಚಿತಪಡಿಸಿಕೊಂಡಿತ್ತು.
ರಾಯಬರೇಲಿಗೆ ತೆರಳಿದ ತಂಡ ಅಲ್ಲಿನ ಜಿಲ್ಲಾ ಕಾರಾಗಹದಿಂದ ವಶಕ್ಕೆ ಪಡೆದುಕೊಂಡಿದ್ದು, ಅಗತ್ಯ ಕಾನೂನು ಪ್ರಕ್ರಿಯೆ ಅನುಸರಿಸಿ ವಾಪಸ್ ಕರೆತಂದಿದ್ದಾರೆ. ಆರೋಪಿಯನ್ನು ಕರೆ ತಂದ ತಂಡಕ್ಕೆ ಜಿಲ್ಲಾಪೊಲೀಸ್ ಇಲಾಖೆ ಬಹುಮಾನ ೋಷಿಸಿದೆ.