ನಿಯಮಾನುಸಾರ ಪರಿಹಾರ ನೀಡಲು ಕ್ರಮ

MINISTER
ಮರಿಯಮ್ಮ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಂಸದ ರಾಜಶೇಖರ್ ಹಿಟ್ನಾಳ್, ಎಸ್ಪಿ ಡಾ.ರಾಮ್ ಎಲ್. ಅರಿಸಿದ್ಧಿ ಇತರರಿದ್ದರು.
Published on

ಗಂಗಾವತಿ: ದಲಿತ ಮಹಿಳೆ ಮರಿಯಮ್ಮ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಆಗೋಲಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.

ಘಟನೆ ಕುರಿತು ಮಹಿಳೆ ಪಾಲಕರಾದ ಗಾಳೆಪ್ಪ ಮತ್ತು ಗಾಳೆಮ್ಮ ಅವರಿಂದ ಮಾಹಿತಿ ಪಡೆದುಕೊಂಡರಲ್ಲದೇ ಕುಟುಂಬದವರಿಗೆ ಸಾಂತ್ವನ ಹೇಳಿದರು.

2023ರಲ್ಲಿ ಗಂಗಾವತಿ ಉಪನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದು, ಗಂಡನ ಮನೆಯವರ ಹಿಂಸೆಯಿಂದ ಸಾವಿಗೀಡಾಗಿದ್ದಾಳೆ. ಮಗಳ ಮೇಲೆ ಹಲ್ಲೆಯಾಗಿದ್ದು, ಸಾವಿನಿಂದ ಅನ್ಯಾಯವಾಗಿದೆ. ಕೂಲಿ ಮಾಡಿ ಬದುಕುತ್ತಿದ್ದು, ಉತ್ತಮ ಸಂಸಾರ ಕಟ್ಟಿಕೊಂಡು ಬಾಳು ಸಾಗಿಸಬೇಕಾದ ಮಗಳ ಸಾವಿನಿಂದ ಕಂಗಾಲಾಗಿದ್ದೇವೆ. ಸರ್ಕಾರದಿಂದ ಪರಿಹಾರ ಕಲ್ಪಿಸುವುದರ ಜತೆಗೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.

ಘಟನೆ ಬಗ್ಗೆ ಡಿಸಿ ನಲೀನ್ ಅತುಲ್ ಮತ್ತು ಎಸ್ಪಿ ಡಾ.ರಾಮ್ ಎಲ್, ಅರಿಸಿದ್ದಿ ಅವರೊಂದಿಗೆ ಚರ್ಚಿಸಿದರು. ಕೂಡಲೇ ಸಮಗ್ರ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ವರದಿ ಪಡೆದುಕೊಂಡು ನಿಯಮಾನುಸಾರ ಪರಿಹಾರ ನೀಡಲು ಪರಿಶೀಲಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಸಂಸದ ರಾಜಶೇಖರ್ ಹಿಟ್ನಾಳ್, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿವೈಎಸ್ಪಿಗಳಾದ ಸಿದ್ದಲಿಂಗಪ್ಪ ಗೌಡ ಪಾಟೀಲ್, ಎಂ.ಡಿ.ೈಜುಲ್ಲಾ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ರಾಜು ಇತರರಿದ್ದರು.

ಮನವಿ: ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ದಲಿತ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಜಿಲ್ಲೆಯಲ್ಲಿ ಅಸ್ಪಶ್ಯತೆ ಜೀವಂತವಾಗಿದ್ದು, ಬೇರುಸಮೇತ ಕಿತ್ತು ಹಾಕಲು ಕ್ರಮ ಕೈಗೊಳ್ಳುವಂತೆ ದಲಿತ ಸಮುದಾಯದ ಮುಖಂಡರು ಸಚಿವರಲ್ಲಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net