

ಗಂಗಾವತಿ: ನಗರ ಸ್ವಚ್ಛತೆಯತ್ತ ಗಮನಹರಿಸುವ ಪೌರ ಕಾರ್ಮಿಕರು ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದ್ದು, ಸಮಸ್ಯೆಗಳಿಗೆ ನಿರಂತರ ಸ್ಪಂದಿಸಲಾಗುವುದು ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು.
ನಗರದ ಐಎಂಎ ಭವನದಲ್ಲಿ ನಗರಾಭಿವೃದ್ಧಿ ಕೋಶ ಮತ್ತು ನಗರಸಭೆಯಿಂದ ಬುಧವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ನಗರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದ್ದು, ಎಮರ್ಜೆನ್ಸಿ ಸಂದರ್ಭದಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ ಎಂದರು.
ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ ಮಾತನಾಡಿ, ಪೌರ ಕಾರ್ಮಿಕರಿಗೆ ನಗರದಲ್ಲಿ ನಿವೇಶನದ ಜತೆಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಿದ್ದು, 42 ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಅನುದಾನ ಕೊರತೆಯಿದೆ. ನಗರೋತ್ಥಾನ 4ನೇ ಹಂತದಲ್ಲಿ ಹಣ ಬಿಡುಗಡೆಗೆ ಮನವಿ ಮಾಡಲಾಗಿತ್ತಾದರೂ, ಬದಲಾದ ಆಡಳಿತ ವ್ಯವಸ್ಥೆಯಿಂದ ವಿಳಂಬವಾಗಿದೆ ಎಂದರು.
ಪೌರಕಾರ್ಮಿಕರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು. ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರು ಕಾರ್ಯಕ್ರಮದಿಂದ ದೂರ ಉಳಿದಿದ್ದು, ಸಂಘಟನೆ ನಿರ್ಧಾರಕ್ಕೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ವಾಸುದೇವ ನವಲಿ, ಉಮೇಶ ಸಿಂಗನಾಳ್, ಶರಭೋಜಿರಾವ್ ಗಾಯಕ್ವಾಡ್, ಮುಷ್ತಾಕ್ ಅಲಿ, ಮುಖಂಡ ರಾಜಮಹ್ಮದ್, ಎಇಇ ಚೇತನನಾಯ್ಕ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಕಂದಾಯ ಅಧಿಕಾರಿ ನಿಜಾಮುದ್ದೀನ್ ಖತೀಬ್, ಪೌರ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ರಗಡಪ್ಪ ಹುಲಿಹೈದರ್, ಜಿಲ್ಲಾಧ್ಯಕ್ಷ ಈ.ರಮೇಶ ಇತರರಿದ್ದರು.
ಪೌರ ಕಾರ್ಮಿಕರ ದಿನಾಚರಣೆಗೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಸೇರಿ ಆಡಳಿತ ಮತ್ತು ವಿಪಕ್ಷ ಬಹುತೇಕ ಸದಸ್ಯರು ಗೈರಾಗಿದ್ದು, ಜನಪ್ರತಿನಿಧಿಗಳ ನಡೆಗೆ ಆಕ್ರೋಶವ್ಯಕ್ತವಾಯಿತು. ನೇರಪಾವತಿ ಮತ್ತು ಹೊರಗುತ್ತಿಗೆ ನೌಕರರ ಸಂಘಟನೆ ಕಾರ್ಯಕ್ರಮ ಬಹಿಷ್ಕರಿಸಿದ್ದವು. ಹೀಗಾಗಿ ಕಾಯಂ ನೌಕರರು ಮಾತ್ರ ಭಾಗವಹಿಸಿದ್ದು, ಪ್ರತಿ ವರ್ಷ ಆಟೋಟಗಳನ್ನು ಆಯೋಜಿಸಲಾಗುತ್ತಿತ್ತು, ಈ ಬಾರಿ ಕೈಬಿಡಲಾಯಿತು. ರಜೆ ಪಡೆಯದೇ ನಿತ್ಯ ಕೆಲಸ ಮಾಡುವ ಪೌರ ಕಾರ್ಮಿಕರ ಕಾರ್ಯಕ್ರಮವನ್ನು ತರಾತುರಿಯಲ್ಲಿ ಪೂರ್ಣಗೊಳಿಸಿದ್ದರಿಂದ ಅಸಮಾಧಾನ ವ್ಯಕ್ತವಾಯಿತು.
ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರು ದೇವರ ಸಮಾನರಾಗಿದ್ದು, ವರ್ಷಕ್ಕೊಮ್ಮೆ ಮಾತ್ರ ರಜೆ ಪಡೆಯುವ ಏಕೈಕ ಸರ್ಕಾರಿ ನೌಕರರು.| ಮನೋಹರಸ್ವಾಮಿ ಹಿರೇಮಠ, ಸದಸ್ಯ, ಗಂಗಾವತಿ