ವೇತನ ಪಾವತಿ ಆಗುವವರೆಗೆ ಹೋರಾಟ ಮುಂದುವರಿಕೆ

Gangavathi circuit house lock
ವೇತನ ವಿತರಣೆ ವಿಳಂಬ ಖಂಡಿಸಿ ತಾಲೂಕಿನ ಪ್ರವಾಸಿ ಮಂದಿರ ಮತ್ತು ಸರ್ಕೀಟ್ ಹೌಸ್ ಹೊರಗುತ್ತಿಗೆ ನೌಕರರು ಗಂಗಾವತಿ ಸರ್ಕೀಟ್ ಹೌಸ್‌ಗೆ ಬೀಗಹಾಕಿರುವುದು.
Published on

ಗಂಗಾವತಿ: ವೇತನ ವಿತರಣೆ ವಿಳಂಬ ಖಂಡಿಸಿ ತಾಲೂಕಿನ ಪ್ರವಾಸಿ ಮಂದಿರ ಮತ್ತು ಸರ್ಕೀಟ್ ಹೌಸ್ ಹೊರಗುತ್ತಿಗೆ ನೌಕರರು, ಕರ್ತವ್ಯ ಸ್ಥಗಿತಗೊಳಿಸಿ ಮಂಗಳವಾರದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಲೋಕೋಪಯೋಗಿ ಇಲಾಖೆ ಅಧೀನದ ಪ್ರವಾಸಿ ಮಂದಿರ, ಸರ್ಕೀಟ್ ಹೌಸ್‌ನಲ್ಲಿ 20ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, 20 ತಿಂಗಳಿಂದ ವೇತನ ಸೇರಿ ಪಿಎ್ ಭರ್ತಿಯಾಗಿಲ್ಲ. ಹಲವು ತಿಂಗಳಿನಿಂದ ವೇತನಕ್ಕಾಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆ ಕಂಪನಿಯೊಂದಿಗೆ ಸಮನ್ವಯ ಸಾಧಿಸಿದರೂ ಪ್ರಯೋಜನವಾಗಿರಲಿಲ್ಲ. ಸ್ಪಷ್ಟ ಮಾಹಿತಿ ಬಾರದಿದ್ದರಿಂದ ಗಂಗಾವತಿ, ಕಾರಟಗಿ, ಕನಕಗಿರಿ ಪ್ರವಾಸಿ ಮಂದಿರ ಮತ್ತು ಸರ್ಕೀಟ್ ಹೌಸ್‌ಗೆ ಬೀಗ ಹಾಕಿ ಅಧಿಕಾರಿಗಳಿಗೆ ಕೊಡುವ ಮೂಲಕ ಹೋರಾಟ ಮುಂದುವರಿಸಿದ್ದಾರೆ. ಉದ್ಯೋಗ ಭದ್ರತೆಯಿಲ್ಲದೆ ಜೀವನ ಸಾಗಿಸುತ್ತಿದ್ದು, ವೇತನ ಮತ್ತು ಪಿಎ್ ನೀಡುತ್ತಿಲ್ಲ. 20 ತಿಂಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೊಟಕುಗೊಳ್ಳುತ್ತಿದೆ. ಕುಟುಂಬಸ್ಥರ ಅನಾರೋಗ್ಯ ಸಮಸ್ಯೆ ನಿವಾರಣೆಗೆ ಹಣದ ಅಡಚಣೆಯಾಗಿದೆ. ಹೀಗಾಗಿ ವೇತನ ವಿತರಣೆಯಾಗುವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ನೌಕರರಾದ ಯಮನಪ್ಪ ಬಿ.ಮಲ್ಲೇಶ, ಹನುಮಂತಿ, ಶ್ರೀನಿವಾಸ, ಬಸವರಾಜ, ರಸೂಲ್ ಖಾನ್, ವಾಸೀಂಖಾನ್, ಸಂಗಪ್ಪ ಇತರರು ಎಚ್ಚರಿಸಿದರು.

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ಮಾತನಾಡಿ, ವೇತನ ಬಿಡುಗಡೆ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದು ರಾಜ್ಯವ್ಯಾಪಿ ಸಮಸ್ಯೆಯಾಗಿದ್ದು, ಟೆಂಡರ್ ಪಡೆದವರೂ ವಿತರಿಸುತ್ತಿಲ್ಲ. ಅವರಿಗೂ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net