

ಗಂಗಾವತಿ: ನಗರದ ಆರಾಧ್ಯ ದೈವ ಶ್ರೀ ಚನ್ನಬಸವ ಶಿವಯೋಗಿಗಳವರ 77ನೇ ಜಾತ್ರಾಮಹೋತ್ಸವ ನಿಮಿತ್ತ ದಶಮಿ ದಿಂಡಿನ ಉತ್ಸವ ದೇವಾಲಯದಿಂದ ಪಾದಗಟ್ಟೆವರಿಗೂ ಭಾನುವಾರ ನೆರವೇರಿಸಲಾಯಿತು.
ಬೆಳಗ್ಗೆಯಿಂದಲೇ ದೇವಾಲಯದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು, ಶ್ರೀ ಚನ್ನಮಲ್ಲಿಕಾರ್ಜುನ ಮತ್ತು ಶ್ರೀ ಚನ್ನಬಸವ ಶಿವಯೋಗಿಗಳ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ ಮತ್ತು ನಿರಂತರ ಭಜನೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ಅಲಂಕೃತ ದಶಮಿ ದಿಂಡಿ ಮಹೋತ್ಸವದಲ್ಲಿ ವಾದ್ಯ ಮೇಳದೊಂದಿಗೆ ಭಕ್ತರು ಭಾಗವಹಿಸಿದ್ದರು. ಪುರಾಣ ಮಂಟಪದಲ್ಲಿ ಪುರಾಣ ಪ್ರವಚನ ನಂತರ, ದಶಕಗಳಿಂದಲೂ ಉಚಿತ ಕೋಚಿಂಗ್ ಸೆಂಟರ್ ಆಯೋಜಿಸುತ್ತಿರುವ ಶ್ರೀ ಸಿಬಿಎಚ್ ಕೋಚಿಂಗ್ ಸೆಂಟರ್ ಸಂಪನ್ಮೂಲ ವ್ಯಕ್ತಿ ಸಿದ್ಧಲಿಂಗೇಶ ಪೂಲಭಾವಿಯರನ್ನು ಸನ್ಮಾನಿಸಲಾಯಿತು.
ಮಠದ ಟ್ರಸ್ಟಿ ಚಂದ್ರೇಗೌಡ ಪೊ.ಪಾಟೀಲ್ ಮಾತನಾಡಿ, ಜ.4ರಂದು ಜೋಡುರಥೋತ್ಸವ ಜರುಗಲಿದ್ದು, ಪಾದಯಾತ್ರೆಗಳು ಮತ್ತು ಹರಕೆ ಸಲ್ಲಿಸುವವರಿಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಪ್ರಸಾದ ವಿತರಿಸಲಾಗುವುದು. ರಥೋತ್ಸವಕ್ಕೆ ಬಾಳೆ ಹಣ್ಣು ಬದಲಾಗಿ ಉತ್ತತ್ತಿಗಳನ್ನು ಅರ್ಪಿಸುವಂತೆ ಮನವಿ ಮಾಡಿದರು.
ರೊಟ್ಟಿಗಳ ಸಲ್ಲಿಕೆ: ಜಾತ್ರಾಮಹೋತ್ಸವ ದಾಸೋಹಕ್ಕಾಗಿ ನಗರದ ಸಿಬಿಎಸ್ ಮಹಿಳಾ ಘಟಕದಿಂದ 2,227 ರೊಟ್ಟಿಗಳನ್ನು ಮಠಕ್ಕೆ ಸಮರ್ಪಿಸಲಾಯಿತು. ದೇವಾಲಯದಲ್ಲಿ ಮಹಿಳಾ ಘಟಕ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದು, ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದೆ ಎಂದು ಸದಸ್ಯರಾದ ಗೀತಾಪಾಟೀಲ್, ಎಚ್.ಶರಣಮ್ಮ, ಆಶಾ, ಗಿರಿಜಾಅರೇಗಾರ್, ಉಷಾ, ಶೈಲಜಾ, ಉಮಾ, ಶಾಲಿನಿ, ಅಕ್ಕಮಹಾದೇವಿ, ಜ್ಯೋತಿ ಇತರರಿದ್ದರು.