

ಗಂಗಾವತಿ: ಪುಣ್ಯಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ದೈವಜ್ಞ ಬ್ರಾಹ್ಮಣ ಸಮಾಜದ ಸದಸ್ಯರು, ಸದ್ಭಾವನಾ ಸೇವಾ ಸಂಸ್ಥೆ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳೊಂದಿಗೆ ಭಾನುವಾರ ನಗರದ ಶ್ರೀ ಬಸವೇಶ್ವರ ಮೂರ್ತಿ ಎದುರು ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.
ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು ಮಾತನಾಡಿ, ಧರ್ಮಸ್ಥಳ ಮತ್ತು ವೀರೇಂದ್ರ ಹೆಗಡೆ ಅವರ ವಿರುದ್ಧ ಆಧಾರಗಳಿಲ್ಲದೆ ಅಪಪ್ರಚಾರ ಹೆಚ್ಚುತ್ತಿವೆ. ಹಿಂದು ಧಾರ್ಮಿಕ ಕ್ಷೇತ್ರಗಳ ಮೇಲೆ ಅಪನಂಬಿಕೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಎಡಪಂಥೀಯ ಮತ್ತು ಧರ್ಮ ವಿರೋಧಿಗಳು ವ್ಯವಸ್ಥಿತ ಸಂಚು ನಡೆಸಿದ್ದು, ಇಂಥವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ಹಿಂದು ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ತು ತಾಲೂಕು ಸಂಚಾಲಕ ವಿಠ್ಠಲ ನಾವಡೆ, ಸಂಸ್ಥೆ ಮುಖ್ಯಸ್ಥ ಸುಬ್ರಮಣ್ಯ ರಾಯ್ಕರ್, ವಿವಿಧ ಸಂಘಟನೆ ಸದಸ್ಯರಾದ ವೀರೇಶ ಬಲ್ಕುಂದಿ, ಶ್ರವಣಕುಮಾರ ರಾಯ್ಕರ್, ಅಶೋಕ ರಾಯ್ಕರ್, ನೀಲಕಂಠಪ್ಪ ನಾಗಶೆಟ್ಟಿ, ಶಿರಿಗೇರಿ ಕಾಶೀನಾಥ, ಕೆ.ನಾಗೇಶ, ರುದ್ರೇಶ ಡ್ಯಾಗಿ, ಬಾಲಾಜಿ ಪಾಲಂಕರ್, ಚಂದ್ರಕಾಂತ್ ದರೋಜಿ ಇತರರಿದ್ದರು.