ಸಿಲಿಂಡರ್ ಸ್ಫೋಟದಿಂದ ಕೋಲ್ಡ್ ಸ್ಟೋರೇಜ್‌ಗೆ ಬೆಂಕಿ

05 gvt 02
ಗಂಗಾವತಿ ಬನ್ನಿಗಿಡದ ಕ್ಯಾಂಪ್‌ನಲ್ಲಿ ಬೆಂಕಿ ಅವಘಡದಿಂದ ಬಾಳೆ ಹಣ್ಣಿನ ಮಂಡಿ ವಸ್ತುಗಳು ಸುಟ್ಟಿರುವುದು.
Published on

ಗಂಗಾವತಿ: ನಗರದ ಬನ್ನಿಗಿಡದ ಕ್ಯಾಂಪ್ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕಂಟೇನರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.

ಎಂಎಕೆ ಬಾಳೆ ಹಣ್ಣಿನ ಮಂಡಿಯ ಕೋಲ್ಡ್ ಸ್ಟೋರೇಜ್ ಎಸಿಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಮಂಡಿಯಲ್ಲಿದ್ದ ಮೂರು ಎಸಿಗಳು, ಮೂರು ಟಾಟಾ ಎಸ್ ವಾಹನ, ಬಾಳೆಕಾಯಿ, ರ್ನಿಚರ್ಸ್‌ ಮತ್ತು ಹಣ್ಣು ಸಾಗಿಸುವ ಪ್ಲಾಸ್ಟಿಕ್ ಕಂಟೇನರ್‌ಗಳು ಸುಟ್ಟುಹೋಗಿವೆ. ಮಂಡಿ ಪಕ್ಕದಲ್ಲಿದ್ದ ರಮೇಶ ಎಲೆಕ್ಟ್ರಿಕಲ್ಸ್‌ಗೆ ಬೆಂಕಿ ವ್ಯಾಪಿಸಿಕೊಂಡಿದ್ದು, ಪ್ಲಾಸ್ಟಿಕ್ ಪ್ರೇರಿತ ವಸ್ತುಗಳೇ ಹೆಚ್ಚಾಗಿದ್ದರಿಂದ ಪ್ರೆಸ್ಟೀಜ್ ಕಂಪನಿಯ ಬೆಲೆಬಾಳುವ ವಸ್ತುಗಳು ಮತ್ತು ಎಲೆಕ್ಟ್ರಿಕಲ್ ವೈರ್‌ಗಳ ಸೇರಿ ಇತರೆ ಸಲಕರಣೆಗಳು ಸಂಪೂರ್ಣ ಸುಟ್ಟುಹೋಗಿವೆ. ಅಳಿದುಳಿದ ವಸ್ತುಗಳನ್ನು ಹೊರತೆಗೆಯಲು ಮಾಲೀಕರು ಮತ್ತು ಸ್ಥಳೀಯರು ಯತ್ನಿಸಿದರಾದರೂ ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ ಸಾಧ್ಯವಾಗಲಿಲ್ಲ. ನಿರಂತರ 4 ಗಂಟೆಗಳವರಿಗೂ ಬೆಂಕಿ ನಂದಿಸುವಲ್ಲಿ ಕಾರ್ಯ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಯತ್ನಿಸಿದರೂ ಲನೀಡಲಿಲ್ಲ. ಬೆಂಕಿ ಕೆನ್ನಾಲಿಗೆಗೆ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗಿದ್ದು, ಬೇವಿನ ಮತ್ತು ಬನ್ನಿಗಿಡಕ್ಕೂ ಬಿಸಿತಟ್ಟಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಏರಿಯಾದಲ್ಲಿ ಕತ್ತಲು ಅವರಿಸಿಕೊಂಡಿತ್ತು.

ಹರಸಾಹಸ: ಬಾಳೆ ಹಣ್ಣಿನ ಮಂಡಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಆರಿಸಲು ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿದ್ದು, ಎರಡೇ ವಾಹನವಿದ್ದರಿಂದ ನೀರು ಸಾಕಾಗಲಿಲ್ಲ. ಕಾರಟಗಿಯಿಂದ ವಾಹನ ಕರೆಯಿಸಲಾಯಿತು. ಎಲೆಕ್ಟ್ರಿಕಲ್ ಅಂಗಡಿ ಮತ್ತು ಗೋದಾಮು ಒಂದೆ ಕಡೆಯಿದ್ದು, ಮುಂಬಾಗಿಲು ಮೂಲಕವೇ ಹೋಗಬೇಕಿತ್ತು. ದಟ್ಟವಾದ ಹೊಗೆಯಿಂದ ಗೋದಾಮಿನಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಗೋದಾಮು ಹಿಂಬದಿಯ ಗೋಡೆಯನ್ನು ಜೆಸಿಬಿ ಮೂಲಕ ಒಡೆದು ಬೆಂಕಿ ನಂದಿಸಲಾಯಿತು. ಗೋದಾಮಿನಲ್ಲಿ 4 ಗ್ಯಾಸ್ ಸಿಲಿಂಡರ್‌ಗಳಿದ್ದು, ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರ ತರುವಲ್ಲಿ ಯಶಸ್ವಿಯಾದರು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಬಳಿ ಸುಧಾರಿತ ಸಲಕರಣೆಗಳಿಲ್ಲದಿದ್ದರಿಂದ ವಿಳಂಬವಾಗಿದ್ದು, ಬೆಂಕಿ ವ್ಯಾಪಿಸಲು ಕಾರಣವಾಯಿತು. ಜನವಸತಿ ಪ್ರದೇಶದಲ್ಲಿ ಬಾಳೆ ಹಣ್ಣಿನ ಮಂಡಿಯಿದ್ದು, ಕೋಲ್ಡ್ ಸ್ಟೋರೇಜ್ ಜತೆಗೆ ಕೆಮಿಕಲ್ ಬಳಸಲಾಗುತ್ತಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರಿಂದ ಬೆಂಕಿ ಅವಘಡಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಬನ್ನಿಗಿಡದ ಕ್ಯಾಂಪ್ ನಿವಾಸಿಗಳು ಮತ್ತು ಜೈನ್ ಸಮುದಾಯದವರು ನೆರವಾದರು.

ಭೇಟಿ: ಬೆಂಕಿ ಅವಘಡ ಸ್ಥಳಕ್ಕೆ ಶಾಸಕ ಪರಣ್ಣಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಭೇಟಿ ನೀಡಿ ನಷ್ಟ ಅನುಭವಿಸಿದ ಮಾಲೀಕರಿಗೆ ಸಾಂತ್ವನ ಹೇಳಿದರು. ನಷ್ಟಕ್ಕೊಳಗಾದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪತ್ರ ಬರೆಯಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net