ಒಂದೆಡೆ ಜನಜಂಗುಳಿ ಸೇರದಿರಲಿ: ಗಂಗಾವತಿ ತಾಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಚಕೋಟಿ ಹೇಳಿಕೆ

30 gvt 01
Published on

ಗಂಗಾವತಿ: ಕೋವಿಡ್ ರೂಪಾಂತರಿ ಶುರುವಾಗುವ ಲಕ್ಷಣಗಳಿದ್ದು, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಸ ವರ್ಷ ಆಚರಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಚಕೋಟಿ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ನಗರಸಭೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು. ಅನ್ಯದೇಶಗಳಲ್ಲಿ ಕೋವಿಡ್ ತೀವ್ರಗೊಳ್ಳುತ್ತಿದ್ದು, ಜಿಲ್ಲೆಯಲ್ಲೂ ಒಂದು ಪ್ರಕರಣ ಕಂಡು ಬಂದಿದೆ. ರೋಗ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮ ಕಡ್ಡಾಯವಾಗಿ ಪಾಲಿಸಬೇಕು. ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಬೇಕು. ಒಂದೆಡೆ ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು. ಬಾರ್, ಪಬ್, ಹೋಟೆಲ್‌ಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯಗೊಳಿಸಬೇಕು. ನಾಲ್ಕು ಗೋಡೆ ಮಧ್ಯೆ ಆಚರಣೆಗಿಂತ ಅಂತರ ಕಾಯ್ದುಕೊಳ್ಳಲು ಖಾಲಿ ಜಾಗದಲ್ಲಿ ಆಯೋಜಿಸಬೇಕು. ಸೋಂಕು ಕಂಡು ಬಂದಲ್ಲಿ ಪರೀಕ್ಷೆಗೊಳಪಡಿಸುವಂತೆ ತಿಳಿಸಿದರು.

ಡಿವೈಎಸ್ಪಿ ಆರ್. ಎಸ್.ಉಜ್ಜನಕೊಪ್ಪ ಮಾತನಾಡಿ, ವರ್ಷಾಚರಣೆ ನೆಪದಲ್ಲಿ ಜನಜಂಗುಳಿ ಸೇರುವುದು ಸರಿಯಲ್ಲ. ಮಧ್ಯರಾತ್ರಿ 12ಗಂಟೆವರೆಗೂ ಅವಕಾಶವಿದ್ದು, ಕುಡಿದು ವಾಹನ ಚಲಾಯಿಸುವವರ ಪರೀಕ್ಷೆಗಾಗಿ 7 ಪರೀಕ್ಷಾ ಸಲಕರಣೆ ವ್ಯವಸ್ಥೆಗೊಳಿಸಲಾಗಿದೆ. ಜೀವಕ್ಕಿಂತ ಪಾರ್ಟಿ ದೊಡ್ಡದಲ್ಲ, ಕುಟುಂಬ ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಎಇಇ ಹೇಮಂತನಾಯ್ಕ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ಗ್ರಾಮೀಣ ಪಿಐ ಎನ್.ಮಂಜುನಾಥ ಇತರರಿದ್ದರು. ಸಭೆಯಲ್ಲಿ ಹೋಟೆಲ್, ಬಾರ್, ಲಾಡ್ಜ್ ಸೇರಿ ವಿವಿಧ ವಿಭಾಗದ ವರ್ತಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net