

ಗಂಗಾವತಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ರೈತರ ಮಕ್ಕಳು ಕೃಷಿ ತೊರೆದು ಉದ್ಯೋಗಕ್ಕಾಗಿ ವಲಸೆ ಹೋಗುವ ಸ್ಥಿತಿ ಬಂದಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮೀ ಹೇಳಿದರು.
ಆನೆಗೊಂದಿ ಸಹಿಪ್ರಾ ಶಾಲೆಯಲ್ಲಿ ಗುರುವಾರ ಸಿಪಿಐ(ಎಂ)ನಿಂದ ಹಮ್ಮಿಕೊಂಡಿದ್ದ 9ನೇ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಮಾತನಾಡಿ, ದೇಶದಲ್ಲಿ ಎಂಟು ಕೋಟಿಗೂ ಹೆಚ್ಚು ನಿರುದ್ಯೋಗಿಗಳಿದ್ದಾರೆ. ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿವೆ. 39 ಲಕ್ಷ ಕೃಷಿ ಹಾಗೂ ದಿನಗೂಲಿ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯ ದೊರೆಯುತ್ತಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಮೂರೂ ಪಕ್ಷಗಳು ವಿಲವಾಗಿವೆ ಎಂದರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುವ ಸರ್ಕಾರದ ವಿರುದ್ಧ ಸಂಘಟಿತ ಹೋರಾಟದ ಅಗತ್ಯ ಎಂದರು. ಸಂಘಟನೆ ಪದಾಧಿಕಾರಿಗಳಾದ ಸುಂಕಪ್ಪ ಗದಗ, ಜಿ.ನಾಗರಾಜ್, ಶ್ರೀನಿವಾಸ ಹೊಸಳ್ಳಿ, ಹುಲಿಗೆಮ್ಮ, ಕೆ.ಹುಸೇನಪ್ಪ, ಮರಿನಾಗ ಡಗ್ಗಿ, ಶಿವಪ್ಪ, ಬಾಳಪ್ಪ ಹುಲಿಹೈದರ್, ಮಂಜುನಾಥ ಡಗ್ಗಿ ಇತರರಿದ್ದರು.