ಸಹಕಾರ ಗಿರಣಿ ಪುನಶ್ಚೇತನಕ್ಕೆ ನಿರಾಸಕ್ತಿ: ನೇಪಥ್ಯಕ್ಕೆ ಸರಿದ ಐದು ದಶಕಗಳ ಅಕ್ಕಿ ಮಿಲ್

16102022 gangavathi tapcms raice mill
Published on

ಗಂಗಾವತಿ: ಐದು ದಶಕಗಳ ಹಿಂದೆ ಶುರುವಾಗಿದ್ದ ನಗರದ ಸಹಕಾರ ಅಕ್ಕಿ ಗಿರಣಿ ಸರ್ಕಾರದ ಅಸಹಕಾರ ಮತ್ತು ಆಡಳಿತ ಮಂಡಳಿ ಇಚ್ಛಾಶಕ್ತಿ ಕೊರತೆಯಿಂದ ನೇಪಥ್ಯಕ್ಕೆ ಸರಿದಿದ್ದು, ಸಂಪೂರ್ಣ ಮುಚ್ಚಿದೆ.

ಎಸ್.ನಿಜಲಿಂಗಪ್ಪ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 1965ರಲ್ಲಿ ಆರಂಭಗೊಂಡ ಗಂಗಾವತಿ ತಾಲೂಕು ವ್ಯವಸಾಯ ಸಹಕಾರ ಉತ್ಪನ್ನ ಮಾರಾಟ ಸಂಘಕ್ಕೆ ನಗರದ ಮಧ್ಯಭಾಗದಲ್ಲಿ 10 ಎಕರೆ ಭೂಮಿ ನೀಡಲಾಗಿತ್ತು. ಸಿಇಒ, ಬ್ಯಾಂಕ್ ಪ್ರತಿನಿಧಿ ಸೇರಿ 10 ಸದಸ್ಯರನ್ನು ಒಳಗೊಂಡ ಸಮಿತಿಯಿಂದ ಸಹಕಾರ ಅಕ್ಕಿ ಗಿರಣಿ ಆರಂಭಿಸಲಾಗಿತ್ತು. ಜಿಲ್ಲೆಯ ಮೊದಲ ಅಕ್ಕಿ ಗಿರಣಿಯಾಗಿತ್ತು. ತುಂಗಭದ್ರಾ ಜಲಾಶಯ ವ್ಯಾಪ್ತಿಯ ಭತ್ತದ ಬೆಳೆಗಾರರಿಗೆ ಅನುಕೂಲವಾಗಿತ್ತು. 30ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದ್ದ ಅಕ್ಕಿಗಿರಣಿ 1990ರವರೆಗೂ ಚಾಲ್ತಿಯಲ್ಲಿದ್ದು, ನಂತರ ಗುತ್ತಿಗೆ ಆಧಾರದ ಮೇಲೆ ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ಆದರೆ, ಸರ್ಕಾರದ ನೀತಿ ಮತ್ತು ಆಡಳಿತ ಮಂಡಳಿ ನಿರಾಸಕ್ತಿಯಿಂದ ಪುನಶ್ಚೇತನಗೊಳ್ಳು ಲಕ್ಷಣಗಳು ಗೋಚರಿಸುತ್ತಿಲ್ಲ.

ಅಪರೂಪದ ಯಂತ್ರ: ಸರ್ಕಾರದ ಲೆವಿ ಯೋಜನೆ ಜಾರಿಯಲ್ಲಿದ್ದಾಗ ಗಿರಣಿ ಉತ್ತುಂಗ ಸ್ಥಿತಿಯಲ್ಲಿತ್ತು. ಮುಂಬೈ, ಪುಣೆ ಮತ್ತು ಹೈದರಾಬಾದ್‌ನಿಂದ ಯಂತ್ರದ ಬಿಡಿಭಾಗಗಳನ್ನು ತರಿಸಿ ಅಳವಡಿಸಿದ್ದು, ಕೆಲವು ಇಂದಿಗೂ ಸುಸ್ಥಿತಿಯಲ್ಲಿವೆ. ಆಡಳಿತ ಕಚೇರಿ ಶಿಥಿಲಗೊಂಡಿದ್ದರೂ ಗಿರಣಿ ನಿರ್ವಹಣೆ ಕಟ್ಟಡಕ್ಕೆ ಏನಾಗಿಲ್ಲ. ಸಹಕಾರ ಇಲಾಖೆ ಅಧೀನದಲ್ಲಿದ್ದು, ಅಂದಿನ ಎಂಎಲ್‌ಎ ರಾಜಾತಿರುಮಲದೇವರಾಯ ಮತ್ತು ಮಾಜಿ ಎಂಎಲ್ಸಿ ಕೆ.ವಿಶ್ವನಾಥ ಸ್ವಾಮಿ ಮುತುವರ್ಜಿಯಲ್ಲಿ ಆದಾಯ ಹೊಂದಿತ್ತು. ಸದ್ಯ ವಾರ್ಷಿಕ 25 ಲಕ್ಷ ರೂ. ಆದಾಯವಿದ್ದರೂ, ಗಿರಣಿ ಆರಂಭಕ್ಕೆ ಪ್ರಸ್ತುತ ಆಡಳಿತ ಮಂಡಳಿ ಆಸಕ್ತಿವಹಿಸುತ್ತಿಲ್ಲ.

ಬಾಡಿಗಿಯಿಂದಲೇ ವೇತನ ಪಾವತಿ: ಟಿಎಪಿಸಿಎಂಎಸ್ ನಿರ್ವಹಣೆಯಲ್ಲಿ 19 ಗೋದಾಮುಗಳಿದ್ದು, ಎಂಟು ವಾಣಿಜ್ಯ ಮಳಿಗೆಗಳಿವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ 17 ನ್ಯಾಯಬೆಲೆ ಅಂಗಡಿಗಳಿವೆ. ಆಹಾರ ಇಲಾಖೆ ಸೇರಿ ಎಲ್ಲ ಗೋದಾಮು ಮತ್ತು ವಾಣಿಜ್ಯ ಮಳಿಗೆಗಳನ್ನು ಖಾಸಗಿಯವರಿಗೆ ಬಾಡಿಗೆ ನೀಡಲಾಗಿದೆ. ಅದರಿಂದ ಬಂದ ಹಣದಿಂದಲೇ 13 ಸಿಬ್ಬಂದಿಗೆ ವೇತನ ಪಾವತಿಸಲಾಗುತ್ತಿದೆ. ರಸಗೊಬ್ಬರ ಮಾರಾಟದ ಪರವಾನಗಿಯಿದ್ದರೂ, ಇತ್ತೀಚಿಗೆ ಖಾಸಗಿಯವರಿಗೂ ನೀಡಿದ್ದರಿಂದ ಪೂರೈಕೆ ಮತ್ತು ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಸಿಇಒ ಹುದ್ದೆ ಖಾಲಿಯಿದ್ದು, ಸಹಕಾರ ಇಲಾಖೆ ಅಧಿಕಾರಿಗೆ ಪ್ರಭಾರವಹಿಸಲಾಗಿದೆ.

ಸದಸ್ಯರಾಗಲು ಪೈಪೋಟಿ : ಸ್ಥಿರಾಸ್ತಿ ಮತ್ತು ಬಾಡಿಗೆ ಆದಾಯ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಲು ಪೈಪೋಟಿ ಇದೆ. ಅಧ್ಯಕ್ಷ ಸ್ಥಾನ ನಾಮನಿರ್ದೇಶಿತರ ಮೇಲೆ ಅವಲಂಬಿತವಾಗಿದೆ. ಪ್ರತಿಷ್ಠೆಗಾಗಿ ಅಧ್ಯಕ್ಷ ಸ್ಥಾನ ಪಡೆಯುವ ಸದಸ್ಯರು, ಗಿರಣಿ ಮರು ಆರಂಭಕ್ಕೆ ಆಸಕ್ತಿ ತೋರುತ್ತಿಲ್ಲ. ಯಂತ್ರಗಳು ತುಕ್ಕು ಹಿಡಿಯುವ ಮುನ್ನ ಮಾರಾಟಕ್ಕೂ ಪರವಾನಗಿ ಪಡೆಯುತ್ತಿಲ್ಲ. ಪ್ರಭಾರ ಸಿಇಒ ಬಸಪ್ಪ ಗಾಳಿ, ಗಂಗಾವತಿ, ಯಲಬುರ್ಗಾ ಮತ್ತು ಟಿಎಪಿಸಿಎಂಎಸ್ ನಿರ್ವಹಿಸಬೇಕಿದ್ದರಿಂದ ಇಲ್ಲಿಗೆ ಬರುವುದು ಅಪರೂಪ. ಸಿಬ್ಬಂದಿ ವಸತಿಗೃಹ ಶಿಥಿಲಗೊಂಡಿದ್ದು, ಯಾರಿಗೂ ಬೇಡವಾಗಿದೆ.

ಕೆಲ ವರ್ಷಗಳ ಹಿಂದೆ ಗಿರಣಿ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು, ಈಗ ಸಂಪೂರ್ಣ ಬಂದ್ ಆಗಿದೆ. ಯಂತ್ರಗಳ ವಿಲೇವಾರಿ ಮಾಡಲು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದು, ಈವರೆಗೆ ಉತ್ತರ ಬಂದಿಲ್ಲ.| ಗುಂಜಳ್ಳಿ ರಾಜಶೇಖರಪ್ಪ ಅಧ್ಯಕ್ಷ, ಟಿಎಪಿಸಿಎಂಎಸ್, ಗಂಗಾವತಿ

ಗೋದಾಮು ಮತ್ತು ವಾಣಿಜ್ಯ ಮಳಿಗೆ ಬಾಡಿಗೆಯಿಂದಲೇ ಈಗಿರುವ ಸಿಬ್ಬಂದಿ ವೇತನ ಪಾವತಿಸಲಾಗುತ್ತಿದೆ. ಅಕ್ಕಿ ಗಿರಣಿಗೆ ಬೇರೆ ಆದಾಯವಿಲ್ಲ. ಮರು ಆರಂಭದ ಯಾವುದೇ ಪ್ರಸ್ತಾವನೆ ಇಲ್ಲ. | ಬಸಪ್ಪ ಗಾಳಿ ಪ್ರಭಾರ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net