23 ವರ್ಷಗಳ ಬಳಿಕ ಆರೋಪಿಯ ಬಂಧನ, 2002ರಲ್ಲಿ ಪತ್ನಿ ರೇಣುಕಮ್ಮಳ ಕೊಲೆ ಶಿಕ್ಷೆ ಆಗುವ ಭಯದಿಂದ ಪರಾರಿಯಾಗಿದ್ದ

arrest of the accused
ಹನುಮಂತಪ್ಪ ಹುಸೇನಪ್ಪ
Published on

ಗಂಗಾವತಿ: ತೀರ್ಪು ಸಂದರ್ಭದಲ್ಲಿ ಕೋರ್ಟ್‌ನಿಂದ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು 23 ವರ್ಷಗಳ ನಂತರ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಗುರುವಾರ ಒಪ್ಪಿಸಿದ್ದಾರೆ.

74 ವರ್ಷದ ಹನುಮಂತಪ್ಪ ಹುಸೇನಪ್ಪ ಬಂಧಿತ ಆರೋಪಿ. ಕೊಲೆ ಮಾಡಿದ್ದಾಗ ಆರೋಪಿಗೆ 49 ವರ್ಷ ವಯಸ್ಸಾಗಿತ್ತು. ಪತ್ನಿಯ ಕೊಲೆ ಆರೋಪದಡಿ 2002ರಲ್ಲಿ ನಗರ ಪೊಲೀಸರು ಬಂಧಿಸಿದ್ದರು. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ನೀಡುವ ದಿನ ಪ್ರಕಟವಾಗಿತ್ತು. ಅಂದು ಕೋರ್ಟ್‌ಗೆ ಬಂದ ಹನುಮಂತಪ್ಪ ಶಿಕ್ಷೆ ಆಗುವ ಭಯದಿಂದ ಪರಾರಿಯಾಗಿದ್ದ.

ನಗರ ಠಾಣೆಯಲ್ಲಿನ ಹಳೇ ಪ್ರಕರಣವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಈ ಪ್ರಕರಣವನ್ನು ಎಎಸ್‌ಐ ಅತೀಕ್ ಅಹ್ಮದ್ ತಂಡಕ್ಕೆ ಒಪ್ಪಿಸಲಾಗಿತ್ತು. ರಾಯಚೂರು ಜಿಲ್ಲೆಯ ಸಿರವಾರದಲ್ಲಿರುವ ಬಗ್ಗೆ ಮಾಹಿತಿ ಪಡೆದ ತಂಡ, ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಲ್ದಾಳ್ ಗ್ರಾಮದ ಹನುಮಂತಪ್ಪ, ಸಿಂಧನೂರು ತಾಲೂಕಿನ ಬಾದರ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕೊಪ್ಪಳ ತಾಲೂಕಿನ ಇಂದ್ರಗಿಯ ರೇಣುಕಮ್ಮಳನ್ನು ಮದುವೆಯಾಗಿದ್ದು, ಗಂಗಾವತಿಯ ಗುಂಡಮ್ಮಕ್ಯಾಂಪ್‌ನಲ್ಲಿ ಮನೆ ಮಾಡಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 2002ರಂದು ಮನೆಯಲ್ಲಿ ಪತ್ನಿ ರೇಣುಕಮ್ಮಳನ್ನು ಕೊಲೆ ಮಾಡಿ, ದೇಹ ತುಂಡರಿಸಿ ಚೀಲದಲ್ಲಿ ತುಂಬಿದ್ದ.

ನಂತರ ಚೀಲವನ್ನು ಧರ್ಮಸ್ಥಳಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಟ್ಟಿದ್ದ. ಚೀಲದ ಬಗ್ಗೆ ಅನುಮಾನಗೊಂಡ ನಿರ್ವಾಹಕ ಕಂಪ್ಲಿಯಲ್ಲಿ ಪರೀಕ್ಷಿಸಿದಾಗ ಮೃತ ದೇಹ ಇರುವುದು ಪತ್ತೆಯಾಗಿತ್ತು. 2002ರಲ್ಲಿ ಈ ಕುರಿತು ಕಂಪ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಗಂಗಾವತಿಯ ಗುಂಡಮ್ಮ ಕ್ಯಾಂಪ್‌ನಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಗಂಗಾವತಿ ನಗರ ಠಾಣೆಗೆ ವರ್ಗಾಯಿಸಲಾಗಿತ್ತು. 2002ಅ.14ರಂದು ಆರೋಪಿಯನ್ನು ಬಂಧಿಸಲಾಗಿತ್ತು.

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2006ರಲ್ಲಿ ಶಿಕ್ಷೆ ಕಾಯಂ ಎಂದು ತಿಳಿದಿದ್ದರಿಂದ ಅಂದಿನಿಂದ ಪರಾರಿಯಾಗಿದ್ದ ಆರೋಪಿ ಹಲವು ಪ್ರದೇಶಗಳಲ್ಲಿ ವಾಸವಾಗಿದ್ದ. ಬಾದರ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಾಹಿತಿ ಪಡೆದಿದ್ದ ಪೊಲೀಸ್ ತಂಡ, ಆರೋಪಿ ರಾಯಚೂರು ಜಿಲ್ಲೆಯಲ್ಲಿರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದರು. ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net