

ಗಂಗಾವತಿ: ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣ ಮತ್ತು ದಲಿತ ಮಹಿಳೆ ಮರಿಯಮ್ಮ ಸಾವು ಪ್ರಕರಣ ಸಮಗ್ರ ತನಿಖೆ ಒತ್ತಾಯಿಸಿ ಕೊಪ್ಪಳ ದಲಿತ ದಮನಿತರ ದೌರ್ಜನ್ಯಗಳ ಒಕ್ಕೂಟದ ಸದಸ್ಯರು ನಗರದ ಪೊಲೀಸ್ ಠಾಣೆ ಮುಂಭಾಗ ಗುರುವಾರ ಪ್ರತಿಭಟಿಸಿದರು.
ಸಾಮಾಜಿಕ ಸಮಾನತೆಗಾಗಿ ಅಸ್ಪೃಶ್ಯ ನಿರ್ಮೂಲನೆ ಹೋರಾಟ ಸಮಿತಿ ಸಹಯೋಗದೊಂದಿಗೆ ತಾಲೂಕಿನ ವಿಠಲಾಪುರದಿಂದ ಪಾದಯಾತ್ರೆ ಮೂಲಕ ನಗರದ ಪೊಲೀಸ್ ಠಾಣೆಗೆ ಆಗಮಿಸಿದ ಒಕ್ಕೂಟದ ಸದಸ್ಯರು ಬೇಡಿಕೆ ಮನವಿಯನ್ನು ತಹಸೀಲ್ದಾರ್ ಯು.ನಾಗರಾಜ್ ಮತ್ತು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡರಿಗೆ ಸಲ್ಲಿಸಿದರು.
ಒಕ್ಕೂಟದ ಸಂಚಾಲಕ ಕರಿಯಪ್ಪ ಗುಡಿಮನಿ ಮಾತನಾಡಿ, ರಾಜ್ಯಾದ್ಯಂತ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಪೊಲೀಸರ ನಿರ್ಲಕ್ಷ್ಯದಿಂದ ತಪ್ಪಿಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಕಾನೂನಿನ ಮೇಲಿನ ಭಯ ಕಡಿಮೆಯಾಗುತ್ತಿದ್ದು, ಅಸ್ಪೃಶ್ಯತೆ ಪ್ರಕರಣಗಳಿಗೆ ಕಡಿವಾಣ ಇಲ್ಲ್ಲದಂತಾಗಿದೆ. ಅಸ್ಪೃಶ್ಯತೆ ನಿರ್ಮೂಲನೆಗೆ ಸೂಕ್ತ ಕಾನೂನು ರೂಪಿಸಬೇಕಿದ್ದು, ದಲಿತ ಮಹಿಳೆ ಕೊಲೆ ಮಾಡಿದ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ವಿಶೇಷ ಪ್ರಕರಣವೆಂದು ಪರಿಗಣಿಸಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಎಚ್.ಎನ್. ಬಡಿಗೇರ್, ಡಿ.ಎಚ್.ಪೂಜಾರ್, ಹಂಪೇಶ್ ಹರಗೋಲು, ಸಿ.ಕೆ.ಮರಿಸ್ವಾಮಿ ಬರಗೂರು, ಗಂಗಣ್ಣ ಸಿದ್ದಾಪುರ, ನಜೀರ್ ಮೂಲಿಮನಿ, ಉಮೇಶ, ಪಾಮಣ್ಣ, ಕನಕಪ್ಪ, ದುರುಗೇಶ ಇತರರಿದ್ದರು.