

ಗಂಗಾವತಿ: ವ್ಯಕ್ತಿಗಿಂತ ಪಕ್ಷದ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ನಗರಸಭೆ ಸದಸ್ಯ ಹಾಗೂ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಶಾಮೀದ್ ಮನಿಯಾರ್ ಹೇಳಿದರು.
ನಗರದ ಎಸ್‌ಎಸ್‌ಎಲ್‌ಆರ್ ಸಭಾಂಗಣದಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕದಿಂದ ಸೋಮವಾರ ಆಯೋಜಿಸಿದ್ದ ಪಕ್ಷದ ನಿಷ್ಠರಿಗೆ ನಿಗಮ ಮಂಡಳಿ ಕುರಿತ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಾಪೇಕ್ಷೆಯಿಲ್ಲದೆ ದುಡಿಯಲಾಗಿದೆ. ಅಭ್ಯರ್ಥಿಯಿಂದ ಯಾವುದೇ ಹಣ ಪಡೆಯದೆ ಪ್ರಾಮಾಣಿಕತೆಯಿಂದ ಪ್ರಚಾರ ಕೈಗೊಂಡಿದ್ದು, ಅಭ್ಯರ್ಥಿಯ ನಿಷ್ಕಾಳಜಿಯಿಂದ ಸೋಲು ಅನುಭವಿಸಬೇಕಾಯಿತು. ಪಕ್ಷದಲ್ಲಿ ವ್ಯಕ್ತಿ ಪೂಜೆಯಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ್ ಸೂಚಿಸುವ ವ್ಯಕ್ತಿಯನ್ನು ಬೆಂಬಲಿಸಲಾಗುವುದು ಎಂದರು.
ಇದನ್ನು ಓದಿ: ಕಾಂಗ್ರೆಸ್ ಬೆಂಬಲಿತೆಗೆ ಒಲಿದ ಅದೃಷ್ಟ
ಪಕ್ಷದಲ್ಲಿನ ಕೆಲ ಬೆಳವಣಿಗೆಯಿಂದ ನೊಂದು ಮೇ ತಿಂಗಳಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಲೋಕಸಭೆವರಿಗೂ ಮುಂದುವರಿಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೂಚಿಸಿದ್ದರು. ಎರಡು ದಶಕಗಳಿಂದಲೂ ಪಕ್ಷಕ್ಕಾಗಿ ದುಡಿಯುತ್ತಿರುವ ಅರಸಿನಕೇರಿ ಹನುಮಂತಪ್ಪರಿಗೆ ನಿಗಮ, ಮಂಡಳಿಗೆ ನೇಮಿಸುವಂತೆ ಹೈಕಮಾಂಡ್‌ಗೆ ಒತ್ತಾಯಿಸಲಾಗುವುದು. ಬೆಂಬಲಿಗರ ಸಭೆಯ ಮೂಲಕ ಹಕ್ಕೋತ್ತಾಯ ಮಂಡಿಸಲಾಗುವುದು ಎಂದರು.
ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್ ಮಾತನಾಡಿ, ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಸಂಘಟನೆಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ದುಡಿಯುತ್ತಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ದೊರೆಯಲು ಶ್ರಮಿಸಲಾಗುವುದು ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯೊಂದಿಗೆ ಗುರುತಿಸಿಕೊಂಡಿದ್ದ ಕಟ್ಟಾ ಬೆಂಬಲಿಗರೇ ಸಭೆ ಆಯೋಜಿಸಿದ್ದು, ಅನ್ಸಾರಿಯನ್ನು ದೂರವಿಟ್ಟು ಮತ್ತು ಯಾವುದೇ ೆಟೋ ಬಳಸದೆ ಆಯೋಜಿಸಲಾಗಿತ್ತು. ಸಭೆಯುದ್ದಕ್ಕೂ ಅನ್ಸಾರಿ ನಿರ್ಲಕ್ಷ್ಯ, ಏಕಪಕ್ಷೀಯ ವರ್ತನೆ ಪ್ರಸ್ತಾಪವಾಗಿದ್ದು, ಕೆಲವರು ನೇರವಾಗಿ ದೂರಿದರೆ, ಇನ್ನೂ ಕೆಲವರು ಅನ್ಸಾರಿ ಹೆಸರು ಬಳಸದೆ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಈಗಾಗಲೇ ಕಾಂಗ್ರೆಸ್ಸಿನಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಬಣಗಳಿದ್ದು, ಅನ್ಸಾರಿ ಬೆಂಬಲಿಗರು ಹೊರ ಬಂದಿದ್ದರಿಂದ ಕಾಂಗ್ರೆಸ್ ಮನೆಗೆ ಹಲವು ಬಾಗಿಲು ಎನ್ನುವಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಕಷ್ಟು ಅವಕಾಶಗಳಿದ್ದರೂ, ಅಭ್ಯರ್ಥಿ ಅನ್ಸಾರಿ ಸ್ವಯಂಕೃತ ಅಪರಾಧ ಸೋಲಿಗೆ ಕಾರಣ ಎಂದು ಕಾರ್ಯಕರ್ತರು ದೂರಿದರು.
ಗಂಗಾವತಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ, ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರಾಮರ್ಶೆ ಸಭೆ ಆಯೋಜಿಸಬೇಕಿತ್ತು. ಅಭ್ಯರ್ಥಿ ಪರ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ದುಡಿದಿದ್ದಾರೆ. ಸೋಲಿಗೆ ಉತ್ತರ ಅಭ್ಯರ್ಥಿಯೇ ನೀಡಬೇಕಿದೆ.ಶಾಮೀದ್ ಮನಿಯಾರ್ನಗರಸಭೆ ಸದಸ್ಯ ಹಾಗೂ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ