ನೀತಿಸಂಹಿತೆ ಉಲ್ಲಂಘನೆ ದೂರಿಗೆ ಸಿ-ವಿಜಿಲ್ ಆ್ಯಪ್

30 gvt 05
Published on

ಗಂಗಾವತಿ: ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ತಾಲೂಕು ಆಡಳಿತ ಸಜ್ಜಾಗಿದ್ದು, ನೀತಿ ಸಂಹಿತೆ ಉಲ್ಲಂಘನೆ ದೂರಿಗಾಗಿ ಸಿ-ವಿಜಿಲ್ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ಗಂಗಾವತಿ ವಿಧಾನಸಭೆ ಚುನಾವಣೆ ಅಧಿಕಾರಿ ಹಾಗೂ ಎಸಿ ಬಸವಣ್ಣೆಪ್ಪ ಕಲ್ಲಶೆಟ್ಟಿ ಹೇಳಿದರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, 99497 ಪುರುಷರು, 1,01,089 ಮಹಿಳೆಯರು ಸೇರಿ 2,00,59 ಮತದಾರರಿದ್ದು, 235 ಮತಗಟ್ಟೆಗಳಿವೆ. 80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನರಿಗೆ ಮೊದಲಬಾರಿಗೆ ಅಂಚೆ ಮೂಲಕ ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

9 ಫ್ಲೈಯಿಂಗ್ ಸ್ಕ್ವಾಡ್, 3 ಸ್ಟಾೃಟಿಕ್ ಸರ‌್ವಲೈನ್ಸ್ ಟೀಂ, 3 ವಿಡಿಯೋ ಸರ‌್ವಲೈನ್ಸ್ ಟೀಂ, ಅಕೌಂಟಿಂಗ್ ಮತ್ತು ವಿಡಿಯೋ ವಿವಿಂಗ್ ಟೀಂ ಸೇರಿ 17 ತಂಡಗಳನ್ನು ರಚಿಸಲಾಗಿದೆ. ಕ್ಷೇತ್ರದಲ್ಲಿ 11 ಅತಿ ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದ್ದು, ಮಹಿಳಾ ಸಿಬ್ಬಂದಿಯನ್ನೊಳಗೊಂಡ ಸಖಿ ಮತಗಟ್ಟೆ ರೂಪಿಸಲಾಗುವುದು. ವಿದ್ಯಾನಗರ, ಚಿಕ್ಕಜಂತಕಲ್, ಕಡೇಬಾಗಿಲು ಬಳಿ ಚೆಕ್‌ಪೋಸ್ಟ್ ಹಾಕಲಾಗುವುದು.ಪರವಾನಗಿಗೆ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲೆದಾಟ ತಪ್ಪಿಸಲಾಗುವುದು ಎಂದರು.

ಡಿವೈಎಸ್ಪಿ ಎಚ್.ಶೇಖರಪ್ಪ ಮಾತನಾಡಿ, ಕ್ಷೇತ್ರದಲ್ಲಿ 316 ರೌಡಿಶೀಟರ್‌ಗಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 250 ರೌಡಿಶೀಟರ್‌ಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಬೂತ್‌ಮಟ್ಟದಲ್ಲಿ ಗೊಂದಲ ಸೃಷ್ಟಿಸುವಂಥ 114 ಜನರನ್ನು ಗುರುತಿಸಲಾಗಿದ್ದು, ಶೀಘ್ರವೇ ಠಾಣೆಗೆ ಕರೆಯಿಸಿ ಸೂಚನೆ ನೀಡಲಾಗುವುದು. ಚುನಾವಣೆ ಮಾಹಿತಿ ಮತ್ತು ದೂರುಗಾಗಿ 1950 ಟೋಲ್ ಫ್ರೀ ವ್ಯವಸ್ಥೆ ಮಾಡಿದ್ದು, ದಿನದ 24 ಗಂಟೆ ಸೇವೆಯಲ್ಲಿರುತ್ತದೆ ಎಂದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net