ಬಿ-ಖಾತೆಯಿಂದ 2 ಕೋಟಿ ರೂ.ಆದಾಯ ನಿರೀಕ್ಷೆ

Special Meeting
ಗಂಗಾವತಿ ನಗರಸಭೆಯಲ್ಲಿ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಬಿ-ಖಾತೆ ಅಭಿಯಾನದ ಕರಪತ್ರಗಳನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಉಪಾಧ್ಯಕ್ಷ ಪಾರ್ವತೆಮ್ಮ ದುರುಗೇಶ ದೊಡ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಇತರರಿದ್ದರು.
Published on

ಗಂಗಾವತಿ: ಅನಧಿಕೃತ ಲೇಔಟ್‌ಗಳಲ್ಲಿನ ಆಸ್ತಿಗಳನ್ನು ಬಿ-ಖಾತೆ ಮೂಲಕ ಸಕ್ರಮಗೊಳಿಸಲಾಗುತ್ತಿದ್ದು, ಐದುಸಾವಿರ ಬಿ-ಖಾತೆಗಳನ್ನು ನಿರ್ವಹಿಸುವ ಗುರಿಹೊಂದಲಾಗಿದೆ ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು.

ನಗರಸಭೆಯಲ್ಲಿ ಬಿ-ಖಾತೆ ಕುರಿತು ಶುಕ್ರವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು. ಅಧಿಕೃತ ಲೇಔಟ್ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿದ ಆಸ್ತಿ ಮಾಲೀಕರಿಗೆ ಈಗಾಗಲೇ ಎ-ಖಾತೆ ನೀಡಲಾಗಿದ್ದು, ಅಭಿಯಾನದಲ್ಲಿ 16 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ನಮೂನೆ-3 ವಿತರಿಸಲಾಗಿದೆ.

ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅನಧಿಕೃತ ಲೇಔಟ್‌ಗಳಲ್ಲಿನ ಆಸ್ತಿಗಳನ್ನು ನಗರಸಭೆ ಲೆಕ್ಕದಲ್ಲಿ ಪಡೆಯಲು ಬಿ-ಖಾತೆ ನೀಡಲಾಗುತ್ತಿದೆ. 2024ರ ಸೆ.10ರೊಳಗಿನ ಆಸ್ತಿಗಳನ್ನು ಸಕ್ರಮಗೊಳಿಸುವ ಉದ್ದೇಶವಿದ್ದು, 2 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸ್ವತ್ತಿನ ಮಾಲೀಕತ್ವದ ದಾನ, ವಿಭಾಗ, ಹಕ್ಕು ಖುಲಾಸೆ ಪತ್ರಗಳು, ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ, ಸ್ವತ್ತಿನ ೆಟೋ ಮತ್ತು ಮಾಲೀಕರ ಗುರುತಿನ ದಾಖಲೆ ಪ್ರತಿ ಕಡ್ಡಾಯ. ಷರತ್ತುಗಳನ್ವಯ ಬಿ-ಖಾತೆ ನೀಡಲಾಗುತ್ತಿದ್ದು, ಸ್ವತ್ತಿನ ಮಾಲೀಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂದರು.

ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಮಾತನಾಡಿ, ಮನೆ ಮಾಲೀಕತ್ವ ಹೊಂದಿವರಿಗೆಲ್ಲ ಬಿ.ಖಾತೆ ನೀಡಬೇಕಿದೆ. ಹಕ್ಕುಪತ್ರ ಬಿಟ್ಟುಕೊಟ್ಟಿದ್ದರೂ, ಬಹುವರ್ಷದಿಂದ ಮನೆಯಲ್ಲಿ ವಾಸಿಸುವ ಮತ್ತು ತೆರಿಗೆ ಭರಿಸುವ ಕೆಲ ಆಸ್ತಿಗಳಿಗೆ ಬಿ.ಖಾತೆ ನೀಡಬೇಕು. ಮಾಲೀಕತ್ವ ಸಾಬೀತುಪಡಿಸುವ ಕೆಲ ದಾಖಲೆಗಳಲ್ಲಿ ದೋಷವಿದ್ದು, ಅರ್ಹರಿಗೆ ಅನ್ಯಾಯವಾಗದಂತೆ ಬಿ-ಖಾತೆ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ ದೊಡ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯ ಮುಷ್ತಾಕ್ ಅಹ್ಮದ್, ಕಂದಾಯ ನಿರೀಕ್ಷಕರು ಮತ್ತು ತೆರಿಗೆ ವಸೂಲಿಗಾರರಿದ್ದರು.

ಸಮನ್ವಯತೆ ಕೊರತೆ: ಸಭೆಯಲ್ಲಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಮಧ್ಯೆ ಸಮನ್ವಯತೆ ಕೊರತೆಯಿದ್ದು, ಬಿ-ಖಾತೆ ನಿರ್ವಹಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಇಲಾಖೆ ಮಾರ್ಗಸೂಚಿ ಅನ್ವಯ ಬಿ-ಖಾತೆ ನಿರ್ವಹಿಸಲು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಸ್ಪಷ್ಟೀಕರಿಸಿದರೆ, ಅನಧಿಕೃತ ಎಲ್ಲ ಆಸ್ತಿಗಳಿಗೆ ಬಿ-ಖಾತೆ ನೀಡುವಂತೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಒತ್ತಾಯಿಸಿದರು. ಇ ತತ್ರಾಂಶ ಯಾವ ದಾಖಲೆಗಳನ್ನು ಕೇಳುವುದೋ ಅಂತಹ ಆಸ್ತಿಗಳಿಗೆ ಮಾತ್ರ ಬಿ-ಖಾತೆ ವಿತರಿಸುವ ಬಗ್ಗೆ ಅಧಿಕಾರಿಗಳು ಹೇಳಿದರು. ಮರುಪರಿಶೀಲಿಸುವಂತೆ ಆಡಳಿತ ಮಂಡಳಿ ಸದಸ್ಯರು ಒತ್ತಾಯಿಸಿದ್ದು, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲು ಆಡಳಿತ ಮಂಡಳಿ ನಿರ್ಧರಿಸಿತು.

ಬಿ-ಖಾತೆ ನೀಡಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಬದಲಿಸಬೇಕಿದ್ದು, ಹಲವು ವರ್ಷಗಳಿಂದ ವಾಸಿಸುತ್ತಿರುವ ಬಗ್ಗೆ ಬಾಂಡ್ ಪೇಪರ್ ಮತ್ತು ಮ್ಯೂಟೇಶನ್ ಆಗಿರುವ ಎಲ್ಲ ಆಸ್ತಿಗಳಿಗೆ ಬಿ-ಖಾತೆ ನೀಡಬೇಕು. ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು.

ಮೌಲಸಾಬ್ ದಾದೇಸಾಬ್, ಅಧ್ಯಕ್ಷ ನಗರಸಭೆ ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net