ರೆಡ್ಡಿ ಬೆಂಬಲಿಗರಿಗೆ ಗಂಗಾವತಿ ಅಧಿಕಾರ

Untitled design (13)
ಗಂಗಾವತಿ ನಗರಸಭೆ ಅಧ್ಯಕ್ಷರಾಗಿ ಮೌಲಸಾಬ್ ದಾದೇಸಾಬ್, ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ದುರುಗೇಶ ದೊಡ್ಮನಿ ಅಯ್ಕೆಯಾದರು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ ಇತರರಿದ್ದರು.
Published on

ಗಂಗಾವತಿ: ಕಳೆದ ವಿಧಾನಸಭೆ ಚುನಾವಣೆ ವೇಳೆ ಕೆಆರ್‌ಪಿಪಿ ಬೆಂಬಲಿಸಿ ಜನಾರ್ದನರೆಡ್ಡಿ ಗೆಲುವಿಗೆ ಕಾರಣರಾಗಿದ್ದ ಕಾಂಗ್ರೆಸ್ ಮೂಲದ ಸದಸ್ಯರಿಗೆ ನಗರಸಭೆ ಅಧಿಕಾರದ ಗದ್ದುಗೆ ಒಲಿದಿದೆ. ಮೂಲ ಬಿಜೆಪಿಗರು ಒಲ್ಲದ ಮನಸಿನಿಂದಲೇ ಮತದಾನ ಮಾಡಿದ್ದು, ಕಾಂಗ್ರೆಸ್‌ನಿಂದ ಗೆದ್ದು ಆನಂತರ ಅಂತರ ಕಾಯ್ದುಕೊಂಡಿದ್ದ ಮೌಲಸಾಬ್ ದಾದೇಸಾಬ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ದೊಡ್ಮನಿ ಆಯ್ಕೆಯಾಗಿದ್ದಾರೆ.

ಮವಾರ ನಡೆದ ಚುನಾವಣೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಪ್ರಕಟಿಸಿದರು. ಈ ವೇಳೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇದ್ದರು. ಒಂದೂವರೆ ವರ್ಷದ ನಂತರ ನಗರಸಭೆ ಚುನಾಯಿತ ಸದಸ್ಯರಿಗೆ ಅಧಿಕಾರದ ಭಾಗ್ಯ ದೊರೆತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದವರಿಗೆ ಅದೃಷ್ಟ ಒಲಿದಿದ್ದು, ಅಧಿಕಾರ ಹಿಡಿದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್‌ಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಮೌಲಸಾಬ್ ದಾದೇಸಾಬ್, ಕಾಂಗ್ರೆಸ್‌ನವರಾದ ಎಂಟನೇ ವಾರ್ಡ್‌ನ ಖಾಸಿಂಸಾಬ್ ಗದ್ವಾಲ್, ಉಪಾಧ್ಯಕ್ಷ ಸ್ಥಾನಕ್ಕೆ 13ನೇ ವಾರ್ಡ್‌ನ ಪಾರ್ವತಮ್ಮ ದುರುಗೇಶ ದೊಡ್ಮನಿ, 32ನೇ ವಾರ್ಡ್‌ನ ಹುಲಿಗೆಮ್ಮ ನಾಗಮ್ಮ ಕಿರಿಕಿರಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಜನಾರ್ದನರೆಡ್ಡಿ ಮತ ಸೇರಿ 36 ಸದಸ್ಯರು ಮತಚಲಾಯಿಸಿದರು. ಈ ಪೈಕಿ ಬಿಜೆಪಿಯೊಂದಿಗೆ ಗುರುಸಿಕೊಂಡಿರುವ ಮೌಲಸಾಬ್ ಮತ್ತು ಪಾರ್ವತಮ ್ಮತಲಾ 28 ಮತ ಪಡೆದು ಆಯ್ಕೆಯಾದರೆ, ಎಂಟು ಮತಗಳನ್ನು ಪಡೆದ ಕಾಂಗ್ರೆಸ್‌ನ ಖಾಸೀಂಸಾಬ್ ಗದ್ವಾಲ್ ಮತ್ತು ಹುಲಿಗೆಮ್ಮ ನಾಗಮ್ಮ ಕಿರಿಕಿರಿ ಪರಾಭವಗೊಂಡರು.

ನಿರೀಕ್ಷೆ ಹುಸಿ: ಬಿಜೆಪಿ ಚಿನ್ಹೆಯಿಂದ ಗೆದ್ದವರೇ ಅಧಿಕಾರ ಹಿಡಿಯಬಹುದೆಂಬ ನಿರೀಕ್ಷೆಯಿತ್ತು. ಜನಾರ್ದನರೆಡ್ಡಿ ಕೆಆರ್‌ಪಿಪಿಯಿಂದ ಗೆದ್ದು, ಕಳೆದ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿಗೆ ವಾಪಸಾಗಿದ್ದರು. ವಿಧಾನಸಭೆ ಚುನಾವಣೆ ವೇಳೆ ನಗರಸಭೆಯ ಕಾಂಗ್ರೆಸ್ ಸದಸ್ಯರಲ್ಲಿ ಕೆಲವರು ರೆಡ್ಡಿ ಬೆಂಬಲಕ್ಕೆ ನಿಂತು, ಅವರ ಗೆಲುವಿಗೆ ಕಾರಣರಾಗಿದ್ದರು. ರೆಡ್ಡಿ ಬಿಜೆಪಿ ಸೇರುತ್ತಿದ್ದಂತೆ ಇವರೂ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಈ ಬಣದಲ್ಲಿದ್ದ ಮೌಲಸಾಬ್ ಮತ್ತು ಪಾರ್ವತಮ್ಮ ಅವರೇ ಈಗ ಆಯ್ಕೆಯಾಗಿದ್ದು, ಬಿಜೆಪಿ ಸದಸ್ಯರೇ ಅವರನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದರು.

ಬಿಜೆಪಿಯನ್ನು ಒಪ್ಪಿದ್ದಾರೆ: ಆಯ್ಕೆ ಪ್ರಕ್ರಿಯೆ ನಂತರ ಪ್ರತಿಕ್ರಿಯಿಸಿದ ಜನಾರ್ದನರೆಡ್ಡಿ, ವಿಧಾನಸಭೆ ಚುನಾವಣೆ ಮುನ್ನವೇ ಕಾಂಗ್ರೆಸ್ ಸದಸ್ಯರು ನಮ್ಮನ್ನು ಬೆಂಬಲಿಸಿದ್ದು, ನಗರಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಬಂದಿರುವವರೂ ಬಿಜೆಪಿಯನ್ನು ಒಪ್ಪಿದ್ದಾರೆ. ನಗರದಲ್ಲಿ ಸಾಮರಸ್ಯ ಹೆಚ್ಚಿಸುವ ದೃಷ್ಟಿಯಿಂದ ಜಾತಿ, ವರ್ಗ ನೋಡದೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ನಗರದ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದಸ್ಯರ ಬೆಂಬಲದೊಂದಿಗೆ ಮಾದರಿ ನಗರವನ್ನಾಗಿ ಪರಿವರ್ತಿಸಲಾಗುವುದು ಎಂದರು.

ನಗರದ ಪ್ರಗತಿಗೆ ದಾರಿ: ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನಗರಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಆಯ್ಕೆಯಾದವರು ನಗರದ ಸೌಂದರೀಕರಣಕ್ಕೆ ಶ್ರಮಿಸಲಿದ್ದಾರೆ ಎಂದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಬಿಜೆಪಿ ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ಜಿ.ಶ್ರೀಧರ್, ಚನ್ನಪ್ಪ ಮಳಗಿ, ಕಾಶೀನಾಥ ಚಿತ್ರಗಾರ, ಸಂತೋಷ ಕೆಲೋಜಿ, ಯಮನೂರ ಚೌಡ್ಕಿ, ನಾಗರಾಜ್ ಚಳಗೇರಿ, ಶಿವಪ್ಪ ಆದೋನಿ ಇತರರಿದ್ದರು.

ಅಸಮಾಧಾನದ ಬೇಗುದಿ: ಸ್ವಂತ ಬಲದಿಂದಲೇ ಬಿಜೆಪಿ ಸುಲಭವಾಗಿ ಪಕ್ಷದ ಸದಸ್ಯರನ್ನು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆ ಮಾಡಲು ಅವಕಾಶವಿದ್ದರೂ ಕಾಂಗ್ರೆಸ್ ಚಿನ್ಹೆಯಿಂದ ಗೆದ್ದು, ಆನಂತರದಲ್ಲಿ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸದಸ್ಯರನ್ನೇ ಆಯ್ಕೆ ಮಾಡಿದಕ್ಕೆ ಬಿಜೆಪಿಯಲ್ಲಿ ಅಸಮಾಧಾನದ ಬೇಗುದಿ ಹೆಚ್ಚಾಗಿದೆ. ಮೂಲ ಬಿಜೆಪಿಗರು ಆಯ್ಕೆ ಪ್ರಕ್ರಿಯೆಯಲ್ಲಿ ಅಸಮಾಧಾನದಿಂದಲೇ ಪಾಲ್ಗೊಂಡಿದ್ದು ಸ್ಪಷ್ಟವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಅಧ್ಯಕ್ಷ-ಉಪಾಧ್ಯಕ್ಷರ ನಾಮಪತ್ರ ಸಲ್ಲಿಕೆ ಸಂದರ್ಭ ಬಿಜೆಪಿ ಸದಸ್ಯರಾರೂ ಜತೆಗಿರಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರಿಗೆ ಕಾಂಗ್ರೆಸ್-ಜೆಡಿಎಸ್ ಸದಸ್ಯರೇ ಸೂಚಕ ಮತ್ತು ಅನುಮೋದಕರಾಗಿದ್ದರು. ಬಿಜೆಪಿ 14, ಇಬ್ಬರು ಪಕ್ಷೇತರು, ಶಾಸಕ ಸೇರಿ 17 ಮತಗಳಿದ್ದು, ಗೆಲ್ಲಲು ಒಬ್ಬರ ಅಗತ್ಯವಿತ್ತು. ಆದರೆ, ಬಿಜೆಪಿ ಜತೆಗೆ ಗುರುತಿಸಿಕೊಂಡಿರುವ ಒಂಬತ್ತು ಸದಸ್ಯರು ಕಾಂಗ್ರೆಸಿಗರಲ್ಲಿ ಇಬ್ಬರಿಗೆ ಅಧಿಕಾರ ನೀಡಿದ್ದು, ಬಿಜೆಪಿ ಮುಖಂಡರಲ್ಲಿ ಬೇಗುದಿಗೆ ದಾರಿ ಮಾಡಿದೆ. ವಿಜಯೋತ್ಸವ ಸಂದರ್ಭ ಮೂಲ ಬಿಜೆಪಿ ಕಾರ್ಯಕರ್ತರು ದೂರ ಉಳಿದಿದ್ದು, ಶಾಸಕ ರೆಡ್ಡಿಯೊಂದಿಗೆ ಗುರುತಿಸಿಕೊಂಡವರೇ ಹೆಚ್ಚಾಗಿದ್ದರು.

ಸಿಕ್ಕ ಗದ್ದುಗೆ ಬಿಟ್ಟರು: ಬಿಜೆಪಿಯಲ್ಲಿ ಅಧಿಕಾರ ಪಡೆುವ ಸಂಖ್ಯೆಯಿದ್ದರೂ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡವರಿಗೆ ಮಣೆ ಹಾಕಬೇಕಿತ್ತಾ ಎಂಬುದು ಕಾರ್ಯಕರ್ತರ ಪ್ರಶ್ನೆ. ಕಾಂಗ್ರೆಸ್ ಸದಸ್ಯರನ್ನು ಆಯ್ಕೆ ಮಾಡುವುದಕ್ಕಾಗಿ ಎಂಟು ದಿನಗಳ ಕಾಲ ಮೋಜು-ಮಸ್ತಿಗೆ ತೆರಳಬೇಕಾಗಿತ್ತಾ ಎಂದು ಬಿಜೆಪಿ ಕಾರ್ಯಕರ್ತರು ಹರಿಹಾಯ್ದಿದ್ದಾರೆ. ಬಿಜೆಪಿಗೆ ದೊರೆಯುತ್ತಿದ್ದ ಅಧಿಕಾರವನ್ನು ಅನಾಯಾಸವಾಗಿ ಪಕ್ಷದ ಮುಖಂಡರೇ ಕೈಚೆಲ್ಲಿದ್ದಾರೆಂದು ಕೆಲ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕಮಲದಲ್ಲಿ ಅರಳಿದ ಕೈ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net