

ಗಂಗಾವತಿ: ವಿಪಕ್ಷಗಳ ಆಕ್ಷೇಪಣೆ ನಡುವೆಯೂ ಸ್ಥಾಯಿ ಸಮಿತಿಯ 9 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ನಗರದ ನಾಲ್ಕು ದಿಕ್ಕುಗಳಲ್ಲಿರುವ ಸ್ವಾಗತ ಕಮಾನು ಬದಲಾವಣೆಗೆ ನಿರ್ಣಯ ಕೈಗೊಳ್ಳಲಾಯಿತು.
ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ಪುರಸಭೆ ಅಧಿನಿಯಮ 1964 ಕಲಂ 63 ಪ್ರಕಾರ ಹೊಸದಾಗಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಬಗ್ಗೆ ಅಧ್ಯಕ್ಷೆ ಹೀರಾಬಾಯಿ ಸಿಂಗ್ ಪ್ರಸ್ತಾಪಿಸಿದರು. ಇದಕ್ಕೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಆಕ್ಷೇಪಿಸಿದ್ದು, ತುರ್ತು ಸಭೆಯಲ್ಲಿ ತರಾತುರಿಯಲ್ಲಿ ಆಯ್ಕೆ ಬೇಡ, ಕಾಲಾವಕಾಶ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ಆಡಳಿತ ಮಂಡಳಿ ಸದಸ್ಯರು ಒಪ್ಪದೇ, ಇಂದೇ ಪ್ರಕ್ರಿಯೆ ನಡೆಸುವಂತೆ ತಿಳಿಸಿದ್ದರಿಂದ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಸ್ಥಾಯಿ ಸಮಿತಿಗೆ ಸುಚೇತಾ ಶಿರಿಗೇರಿ, ಎಂ.ಡಿ.ಉಸ್ಮಾನ್, ಉಮೇಶ ಸಿಂಗನಾಳ್, ಮುಷ್ತಾಕ್ ಅಹ್ಮದ್, ನವಲಿ ವಾಸುದೇವ, ಜಯಶ್ರೀ ಸಿದ್ದಾಪುರ, ಸೋಮನಾಥ ಭಂಡಾರಿ, ರಮೇಶ ಚೌಡ್ಕಿ ಮತ್ತು ನವೀನ್ ಮಾ.ಪಾಟೀಲ್ ನಾಮಪತ್ರ ಸಲ್ಲಿಸಿದರು. ವಿಪಕ್ಷದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ.
ಅಭಿವೃದ್ಧಿ ಪರ್ವ ಶುರು: ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ನಗರದ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆ ಯೋಜನೆಯಡಿ 110 ಕೋಟಿ ರೂ. ಅನುದಾನ ಕ್ರೋಢಿಕರಿಸಲಾಗಿದೆ. ಸಿಎಂ ವಿಶೇಷ ಅನುದಾನದ 25 ಕೋಟಿ ರೂ.ಗಳಲ್ಲಿ 20 ಕೋಟಿ ರೂ.ಗಳನ್ನು ನಗರಕ್ಕೆ ಮೀಸಲಿಡಲಾಗುವುದು. 18 ಕೋಟಿ ರೂ.ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ, 25 ಕೋಟಿ ರೂ. ವೆಚ್ಚದಲ್ಲಿ ರೈಲು ನಿಲ್ದಾಣ ಅಭಿವೃದ್ಧಿ, 30ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ, ನಗರೋತ್ಥಾನದ 20 ಕೋಟಿ ರೂ.ಗಳಲ್ಲಿ ಮುಖ್ಯ ಮತ್ತು ಒಳರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು.
ವಾರ್ಡ್ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸದೇ ಎಲ್ಲ ವಾರ್ಡ್‌ಗಳಿಗೆ ಸಮನಾಗಿ ಕೈಗೆತ್ತಿಕೊಳ್ಳಲಾಗುವುದು. ಈ ಹಿಂದೆ 20ಕೋಟಿ ರೂ.ವೆಚ್ಚದ ಕ್ರಿಯಾಯೋಜನೆ ರೂಪಿಸಿದ್ದರೆ ಮಾಜಿ ಸಚಿವರೊಬ್ಬರು ಅನುದಾನ ಬಿಡುಗಡೆಯಾಗದಂತೆ ತಡೆಹಿಡಿದಿದ್ದರೂ ಎಂದು ಅನ್ಸಾರಿ ಹೆಸರೇಳದೇ ಪ್ರಸ್ತಾಪಿಸಿದ್ದರಿಂದ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಆಕ್ಷೇಪಿಸಿದರು. ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಎಂದಿಗೂ ಅಡ್ಡಿಯಾಗಿಲ್ಲ ಎಂದರು.
ಅನುಮೋದನೆ: ನಗರ ಪ್ರವೇಶದ ಮುಖ್ಯರಸ್ತೆಯಲ್ಲಿ ಭತ್ತದ ನಾಡು ಗಂಗಾವತಿ ಬದಲಾಗಿ ಹನುಮನನಾಡು ಎಂದು ನಾಮಲಕಗಳನ್ನು ಹಾಕುವುದು ಸೇರಿ 3, 17 ಮತ್ತು 23ನೇ ವಾರ್ಡ್‌ನಲ್ಲಿನ ವಿವಿಧ ಕಾಲನಿಗಳ ಸಾರ್ವಜನಿಕ ಶೌಚಗೃಹ ಸ್ಥಳಾಂತರ, ಮಳೆ ನೀರು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು. ನಗರಸಭೆ ಅಧ್ಯಕ್ಷ ಹೀರಾಬಾಯಿಸಿಂಗ್, ಉಪಾಧ್ಯಕ್ಷೆ ಸುಧಾ ಸೋಮನಾಥ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಸೇರಿ 35 ಸದಸ್ಯರಲ್ಲಿ 27 ಸದಸ್ಯರು ಭಾಗವಹಿಸಿದ್ದರು.
ವರದಿ ಎೆಕ್ಟ್, ಎಚ್ಚೆತ್ತ ಆಡಳಿತ: ನಗರಸಭೆಗೆ ಮೊದಲ ಬಾರಿಗೆ ನಾಲ್ಕು ಸ್ಥಾಯಿ ಸಮಿತಿಯನ್ನು ಆ.10ರಂದು ಆಯ್ಕೆ ಮಾಡಿದ್ದು, ಸೆ.19ರಂದು ಆಯ್ಕೆ ಪ್ರಕ್ರಿಯೆ ಆದೇಶ ಪತ್ರ ವಿತರಿಸಲಾಗಿತ್ತು. ವಾಸ್ತವವಾಗಿ ಸ್ಥಾಯಿ ಸಮಿತಿಗೆ 10 ತಿಂಗಳ ಅಧಿಕಾರವಿದ್ದು, ಪೂರ್ಣಗೊಂಡ ದಿನವೇ ಹೊಸದಾಗಿ ಆಯ್ಕೆ ಮಾಡಿರುವ ಬಗ್ಗೆ ನೀಡಿರುವ ಆದೇಶ ಪತ್ರಕ್ಕೆ ಮನ್ನಣೆಯಿರಲಿಲ್ಲ, ಕಾಯ್ದೆ ಅನ್ವಯ ಆಯ್ಕೆಯಾಗಿರಲಿಲ್ಲ
ಈ ಬಗ್ಗೆ ಜಿಲ್ಲಾಡಳಿತವೂ ಆಕ್ಷೇಪಿಸಿತ್ತು. ವಿಜಯವಾಣಿಯಲ್ಲಿ ಅ.04ರಂದು ಸ್ಥಾಯಿ ಸಮಿತಿ ರಚನೆ ಗೊಂದಲ ಕುರಿತು ವಿಸ್ತೃತ ವರದಿ ಪ್ರಕಟಗೊಂಡಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ತುರ್ತು ಸಭೆ ಮೂಲಕ ಹೊಸ ಸ್ಥಾಯಿ ಸಮಿತಿ ಸದಸ್ಯರನ್ನು ಅಧಿಕೃತ ಆಯ್ಕೆ ಮಾಡಿಕೊಂಡಿದೆ. ಈ ಹಿಂದೆ ಇದ್ದವರನ್ನೇ ಮುಂದುವರಿಸಲಾಗಿದ್ದು, ಸದಸ್ಯ ಶರೋಭೋಜಿರಾವ್ ಗಾಯಕ್ವಾಡ್ ಬದಲಿಗೆ ಮುಷ್ತಾಕ್‌ಗೆ ಅವಕಾಶ ಸಿಕ್ಕಿದೆ. ಇನ್ನೊಂದು ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಮಾಡುವ ನಿರ್ಣಯ ಕೈಗೊಂಡಿದೆ.
ಕ್ಷೇತ್ರಕ್ಕೆ ಮಂಜೂರಾಗುವ ಅನುದಾನವನ್ನು ಸಮರ್ಪಕ ಬಳಸಿಕೊಳ್ಳಲಾಗುತ್ತಿದ್ದು, ಪಕ್ಷ ಬೇಧಕ್ಕೆ ಅವಕಾಶ ನೀಡಲ್ಲ. ಅಗತ್ಯ ಕಾಮಗಾರಿಗಳ ಬಗ್ಗೆ ವಾರ್ಡ್ ಸದಸ್ಯರು ಮಾಹಿತಿ ನೀಡಿದರೆ ಕ್ರೀಯಾಯೋಜನೆ ರೂಪಿಸಲಾಗುವುದು.
ಗಾಲಿ ಜನಾರ್ದನರೆಡ್ಡಿ
ಶಾಸಕ