

ಗಂಗಾವತಿ: ಸ್ವಚ್ಛತೆ ಕಲ್ಪನೆ ಸಾರ್ವಜನಿಕರಲ್ಲಿ ಬಂದಾಗ ಮಾತ್ರ ಪೌರ ಕಾರ್ಮಿಕರ ಶ್ರಮ ಕಡಿಮೆಯಾಗಲಿದ್ದು, ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳ ಬೇಕೆಂದು ದಂತ ವೈದ್ಯ ಹಾಗೂ ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್ ಹೇಳಿದರು.
ನಗರಸಭೆ ಆವರಣದಲ್ಲಿ ನಗರಸಭೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಪೌರ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ನಗರದ ಸ್ವಚ್ಛತೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಇದನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯೆವುದನ್ನು ಬಿಡಬೇಕಿದೆ. ಸ್ವಚ್ಛತೆ ಪರಿಕಲ್ಪನೆ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ನಗರದ ಸೌಂದರೀಕರಣ ಸಾಧ್ಯವಾಗಲಿದೆ ಎಂದರು.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದ್ದು, ಆರೋಗ್ಯ ರಕ್ಷಣೆಯತ್ತ ಗಮನಹರಿಸಬೇಕಿದೆ. ಕಾರ್ಮಿಕರು ಕುಟುಂಬದ ಸದಸ್ಯರಿದ್ದಂತೆ, ಸಕಾಲಕ್ಕೆ ವೇತನ, ಆರೋಗ್ಯ ತಪಾಸಣೆ, ವಿಮೆ, ಸುರಕ್ಷಾ ಕಿಟ್ ಸೇರಿ ಮೂಲ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಲಾಗುತ್ತಿದೆ ಎಂದರು.
ಬಾಲಕರ ಸ.ಪ.ಪೂ. ಕಾಲೇಜಿನ ಗ್ರಂಥಪಾಲಕ ರಮೇಶ ಗಬ್ಬೂರ್ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಎಲ್ಲ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಿಬ್ಬಂದಿಗೆ ಆಯೋಜಿಸಿದ್ದ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗೀತಗಾಯನಕ್ಕೆ ಸಿಬ್ಬಂದಿ ವಯಸ್ಸಿನ ಭೇದಭಾವವಿಲ್ಲದೆ ಹೆಜ್ಜೆ ಹಾಕಿದ್ದು ಗಮನಸೆಳೆಯಿತು. ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಸೇರಿ ಕಾಂಗ್ರೆಸ್ ಸದಸ್ಯರು ಗೈರಾಗಿದ್ದರು.
ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಉಪಾಧ್ಯಕ್ಷೆ ದುರುಗೇಶ ದೊಡ್ಮನಿ, ಪೌರ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ವಾಹೀದ್‌ಖಾನ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಎ.ನಾಗರಾಜ್, ಪ್ರವೀಣಸಾಗರ್, ಸಣ್ಣ ರಾಮಣ್ಣ, ಕೆ.ಎಂ.ಮಲ್ಲಿಕಾರ್ಜುನ, ಮಲ್ಲಮ್ಮ, ಗೌತಮ, ರಾಜೇಶ, ರಾಮಣ್ಣ ಗುಗ್ರಿ, ಹನುಮಂತಪ್ಪ, ಆಂಜನೇಯ ಇತರರಿದ್ದರು.