

ಗಂಗಾವತಿ: ನೇಕಾರ ಸಮುದಾಯದ ಸ್ಥಿತಿಗತಿ ದಾಖಲೀಕರಣಕ್ಕಾಗಿ ಒಕ್ಕೂಟದಿಂದ ಪ್ರತ್ಯೇಕ ಜಾತಿ ಗಣತಿ ಸಮೀಕ್ಷೆ ಹಮ್ಮಿಕೊಂಡಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿದರು.
ನಗರದ ನೀಲಕಂಠೇಶ್ವರ ಸಭಾಂಗಣದಲ್ಲಿ ನೇಕಾರ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಜಾತಿ ಗಣತಿ ಸಮೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿ ನೇಕಾರ ಒಕ್ಕೂಟದವರ 45ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದರೂ, ಕಳೆದ ಬಾರಿ ಸರ್ಕಾರ ಕೈಗೊಂಡ ಸಮೀಕ್ಷೆಯಲ್ಲಿ 9.25ಲಕ್ಷ ಮಾತ್ರ ದಾಖಲೀಕರಿಸಲಾಗಿತ್ತು. ಸಮೀಕ್ಷೆ ತಪ್ಪಾಗಿರುವ ಬಗ್ಗೆ ಸರ್ಕಾರಕ್ಕೆ ಒಕ್ಕೂಟದಿಂದ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಪುನಃ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಸೆ.22ರಿಂದ ಆರಂಭಿಸುತ್ತಿದ್ದು, ಅದಕ್ಕೂ ಮುನ್ನ ಒಕ್ಕೂಟದಿಂದಲೇ ಪ್ರತ್ಯೇಕ ಜಾತಿ ಗಣತಿ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶವಿದ್ದು, ಸಮೀಕ್ಷೆಯ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಒಕ್ಕೂಟದ ಸದಸ್ಯರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದು, ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ನೇಕಾರ ಒಕ್ಕೂಟದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ನೇಕಾರ ಒಕ್ಕೂಟದಲ್ಲಿ 14ಕ್ಕೂ ಹೆಚ್ಚು ಉಪಪಂಗಡಗಳಿದ್ದು, ಸರ್ಕಾರದ ಜಾತಿ ಗಣತಿ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಹಿಂದು ಮತ್ತು ಜಾತಿ ಕಾಲಂನಲ್ಲಿ ನೇಕಾರ ಎಂದು ನಮೂದಿಸುವಂತೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಒಕ್ಕೂಟದಿಂದಲೇ ಪ್ರತ್ಯೇಕ ಗಣತಿ ನಡೆಯಲಿದ್ದು, ಪ್ರತಿಯೊಬ್ಬರ ಸಹಕಾರ ಮುಖ್ಯ. ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಮೀಕ್ಷೆ ಸಹಕಾರಿಯಾಗಿದ್ದು, ವಾಸ್ತವ ಜನಸಂಖ್ಯೆ ಗೊತ್ತಾಗಲಿದೆ ಎಂದರು.
ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಕಾಳಪ್ಪ, ಪದಾಧಿಕಾರಿಗಳಾದ ಎನ್.ಜನಗದೀಶ್, ಹೇಮಲತಾ ಇಂದ್ರೇಶ್, ಉಮಾ ಜಗದೀಶ, ರುಕ್ಮಿಣಿ ಗಣೇಶ ಸಂಗ, ಶಿಲ್ಪಾ ಪ್ರೇಮಾನಂದ, ಶೋಭಾ ಮುರಳೀಕೃಷ್ಣ, ಉಮಾದೇವಿ, ಜ್ಯೋತಿ ಕೃಷ್ಣ, ತಾರಾಮತಿ, ಲಕ್ಷ್ಮೀಗೌಡರ್, ನವೀನ್ ಚಿಲ್ಲಾಳ್, ದಯಾನಂದ ಶೆಟ್ಟಗಾರ್, ಶಿವಶಂಕ್ರಪ್ಪ ಚೆನ್ನ ಇತರರಿದ್ದರು.
ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲೂ ನೇಕಾರ ಸಮುದಾಯವಿದ್ದು, 14ಕ್ಕೂ ಹೆಚ್ಚು ಉಪ ಪಂಗಡಗಳನ್ನೊಳಗೊಂಡಿದೆ. ನೇಕಾರ ಜಾತಿ ಎಂದು ನಮೂದಿಸಲು ಸೂಚಿಸಲಾಗಿದೆ.
ಎಂ.ಮಲ್ಲಿಕಾರ್ಜುನನಾಗಪ್ಪ ಮಾಜಿ ಸಚಿವ