ಆಮೆಗತಿಯಲ್ಲಿ ಸಾಗಿದ ಕಾಮಗಾರಿ

MANAVI
ಕೊಪ್ಪಳ ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ವಿಜಯನಗರ ಕಾಲುವೆ ನೀರು ಬಳಕೆದಾರರ ಸಂಘದ ಸದಸ್ಯರು ಮುಖ್ಯ ಇಂಜಿನಿಯರ್ ಜೆ.ಬಸವರಾಜ್‌ಗೆ ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಸಂಘದ ಅಧ್ಯಕ್ಷ ಈ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಎಚ್.ಎಂ. ಘನಮಠಸ್ವಾಮಿ, ನಿರ್ದೇಶಕರಾದ ಚಂದ್ರಶೇಖರ್ ಭತ್ತದ್, ಎಚ್.ಎಂ.ವಿರೂಪಾಕ್ಷಯ್ಯಸ್ವಾಮಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಕೈಗೆತ್ತಿಕೊಂಡ ವಿಜಯನಗರ ಕಾಲುವೆ ದುರಸ್ತಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ವಿಜಯನಗರ ಕಾಲುವೆ ನೀರು ಬಳಕೆದಾರರ ಸಂಘದ ಸದಸ್ಯರು ಕೊಪ್ಪಳ ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಮುಖ್ಯ ಇಂಜಿನಿಯರ್ ಜೆ.ಬಸವರಾಜ್‌ಗೆ ಬುಧವಾರ ಮನವಿ ಸಲ್ಲಿಸಿದರು.

ರೈತರು ಮತ್ತು ಸಂಘದ ಸದಸ್ಯರೊಂದಿಗೆ ಮುಖ್ಯ ಇಂಜಿನಿಯರ್ ಅವರನ್ನು ಭೇಟಿಯಾದ ನಿಯೋಗ, ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಆಡಳಿತಾಧಿಯಲ್ಲಿ ಆನೆಗೊಂದಿ ಭಾಗದ ಕೃಷಿ ಭೂಮಿಗೆ ನೀರು ಒದಗಿಸಲು ವಿತರಣೆ ಮತ್ತು ಬಸಿಕಾಲುವೆ ನಿರ್ಮಿಸಿದ್ದು, 11 ತಿಂಗಳು ನೀರು ದೊರೆಯುವಂತೆ ಮಾಡಲಾಗಿತ್ತು. ಕಾಲುವೆ ಆಧುನೀಕರಣಕ್ಕಾಗಿ ರಾಜ್ಯ ಸರ್ಕಾರ ಕಾಮಗಾರಿ ಕೈಗೆತ್ತಿಕೊಂಡಿದ್ದು, ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಅನುದಾನ ಪಡೆದುಕೊಂಡಿದೆ.

2024 ಮುಂಗಾರು ಶುರುವಾಗುವ ವೇಳೆ ಕಾಮಗಾರಿಪೂರ್ಣಗೊಳಿಸಬೇಕಿತ್ತು. ಆದರೆ ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದ್ದು, ಸಮರ್ಪಕ ನೀರು ದೊರೆಯುತ್ತಿಲ್ಲ. ಕೆಲ ಕಡೆ ಕಿರುಸೇತುವೆ, ಕಾಲುವೆ ದುರಸ್ತಿ ಸೇರಿ ಟೆಂಡರ್ ನಿಯಮಾವಳಿಯಂತೆ ಹಲವು ಕಾಮಗಾರಿ ಬಾಕಿ ಉಳಿದುಕೊಂಡಿವೆ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net