ಯುವ ಮತದಾರರ ನೋಂದಣಿಗೆ ಆದ್ಯತೆ ನೀಡಿ

BLO MEETING
ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ನಿಮಿತ್ತ ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಕಂದಾಯ ಇಲಾಖೆ ಚುನಾವಣೆ ವಿಭಾಗದಿಂದ ಬಿಎಲ್‌ಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಚುನಾವಣೆ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ ಗುರುವಾರ ಮಾತನಾಡಿದರು. ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರಾದ ಲಕ್ಷ್ಮೀ ಗೋಟೂರು, ಈರಮ್ಮ ಇತರರಿದ್ದರು.
Published on

ಗಂಗಾವತಿ: ಹೊಸ ಮತದಾರರ ನೋಂದಣಿಗಾಗಿ ಬಿಎಲ್‌ಒಗಳು ವಾರ್ಡ್ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಬೇಕಿದ್ದು, ಪದವಿ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಚುನಾವಣೆ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ನಿಮಿತ್ತ ನಗರದ ತಾಪಂ ಮಂಥನ ಸಭಾಂಗಣದಲ್ಲಿ ಕಂದಾಯ ಇಲಾಖೆ ಚುನಾವಣೆ ವಿಭಾಗದಿಂದ ಗುರುವಾರ ಬಿಎಲ್‌ಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2,11,031 ಮತದಾರರಿದ್ದು, ಪ್ರಸಕ್ತ ಸಾಲಿನ ಮತ ಪಟ್ಟಿ ಪರಿಷ್ಕರಣೆ ಶುರುವಾಗಿದೆ.

ಮುಂದಿನ ವರ್ಷ 18 ತಲುಪಲಿರುವ ಯುವ ಮತದಾರರ ನೋಂದಣಿಗೆ ಆದ್ಯತೆ ನೀಡಬೇಕಿದ್ದು, ಆನ್‌ಲೈನ್ ಮೂಲಕವೇ ಅರ್ಜಿ ನಮೂನೆ ಭರ್ತಿ ಮಾಡಬೇಕು. ಮೊಬೈಲ್‌ನಲ್ಲಿರುವ ವೋಟರ್ ಆ್ಯಪ್‌ನಲ್ಲಿ ನೋಂದಣಿ, ತಿದ್ದುಪಡಿ, ವಿಳಾಸ ಸ್ಥಳಾಂತರ ಇತರ ಮಾಹಿತಿ ನಮೂದಿಸಲು ಅವಕಾಶವಿದೆ. ಮತಪಟ್ಟಿ ಪರಿಷ್ಕರಣೆ ನವೆಂಬರ್ ಅಂತ್ಯದವರೆಗೂ ಮುಂದುವರಿಯಲಿದೆ. ಪದವಿ ಕಾಲೇಜುಗಳಲ್ಲಿ ಯುವ ಮತದಾರರು ದೊರೆಯಲಿದ್ದು, ಪ್ರಾತ್ಯಕ್ಷಿಕೆ ಮೂಲಕ ಮತದಾರರ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲಕ್ಷ್ಮೀ ಗೋಟೂರು ಮಾತನಾಡಿ, ವಿಶೇಷ ಆಂದೋಲನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ವಿವಿಧ ಇಲಾಖೆ ಸರ್ವೇ ಒತ್ತಡವಿದ್ದರೂ ಮತ ಪರಿಷ್ಕರಣೆ ಕಾರ್ಯದಲ್ಲಿ ಕಡ್ಡಾಯವಾಗಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಇಲಾಖೆ ಮೇಲ್ವಿಚಾರಕಿ ಈರಮ್ಮ, ವಿಷಯ ನಿರ್ವಾಹಕ ಮುತ್ತುರಾಜ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನಗರಸಭೆ ಕರವಸೂಲಿಗಾರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net