ವಿದೇಶಿ ಮೂಲದ ಬ್ಲಾಕ್ ಕಾರ್ನ್ ಬೆಳೆದ ದೇಶಿ ರೈತ

Black and Gold Corn,
ಗಂಗಾವತಿ ತಾಲೂಕಿನ ಎಚ್.ಜಿ.ರಾಮುಲುನಗರದ ಹೊಲದಲ್ಲಿ ಬೆಳೆದಿರುವ ವಿದೇಶಿ ಮೂಲದ ಬ್ಲಾಕ್ ಕಾರ್ನ್.
Published on

ಗಂಗಾವತಿ: ಅಮೆರಿಕದ ಶೀತೋಷ್ಣವಲಯದಲ್ಲಿ ಹೆಚ್ಚಾಗಿ ಬೆಳೆಯುವ ಬ್ಲಾಕ್ ಮತ್ತು ಗೋಲ್ಡ್ ಕಾರ್ನ್ (ಕಡುಕಪ್ಪು ಮತ್ತು ಬಂಗಾರ ಬಣ್ಣದ ಮೆಕ್ಕೆಜೋಳ) ತಳಿಯನ್ನು ತಾಲೂಕಿನ ಎಚ್.ಜಿ.ರಾಮುಲು ನಗರದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶ ಕಂಡಿದ್ದಾರೆ.

ಚಿಕ್ಕಬೆಣಕಲ್ ಗ್ರಾಪಂ ನೀರಗಂಟೆ ಲಕ್ಷ್ಮಣ ಪೂಜಾರಿ ಅವರು ಬೆಳೆದಿದ್ದು, ಬೀಜಕ್ಕಾಗಿ 200 ತೆನೆ ಸಂಗ್ರಹಿಸಿದ್ದಾರೆ. ತಾಲೂಕಿನ ಎಚ್.ಜಿ.ರಾಮುಲು ನಗರದ ಬಳಿ 5.30 ಎಕರೆ ಭೂಮಿ ಹೊಂದಿದ ಲಕ್ಷ್ಮಣ ಪೂಜಾರಿ, ಮೊದಲ ಬಾರಿಗೆ ಅಮೆರಿಕ ಮೂಲದ ಮೆಕ್ಕೆಜೋಳವನ್ನು ಬೆಳೆದು ಬೀಗಿದ್ದಾರೆ. ಪ್ರಾಯೋಗಿಕವಾಗಿ 10 ಗುಂಟೆಯಲ್ಲಿ ಬಿತ್ತನೆ ಮಾಡಿದ್ದು, 200 ತೆನೆ ಫಸಲು ಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ತೆನೆವೊಂದಕ್ಕೆ 2000 ರೂ. ದರವಿದೆ. ಗೋಲ್ಡ್ ಮತ್ತು ಬ್ಲಾಕ್ ಕಾರ್ನ್‌ಗಳು ಉತ್ತಮ ಸಲು ಬಂದಿದೆ. ಗೋಲ್ಡ್‌ನಲ್ಲಿ ಅಲ್ಲಲ್ಲಿ ಕೆಂಪು ಕಾಳುಗಳು ಕಂಡು ಬಂದಿವೆ. ಸ್ಥಳೀಯ ಮೆಕ್ಕೆಜೋಳ ತಳಿ ಒಂದು ತೆನೆ ಬಿಟ್ಟರೆ, ಅಮೆರಿಕದ ತಳಿ 2 ರಿಂದ 3 ತೆನೆಗಳನ್ನು ಹೊಂದಿರುವುದು ವಿಶೇಷ.

ಆಕಸ್ಮಿಕ ನಿರ್ಧಾರ: ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥರೊಂದಿಗೆ ಸೆಪ್ಟಂಬರ್ 2024ರಲ್ಲಿ ಬೆಂಗಳೂರಿನ ಮಾಲ್‌ಗೆ ತೆರಳಿದ್ದ ಲಕ್ಷ್ಮಣ ಪೂಜಾರಿ, ಮಾರಾಟಕ್ಕಿಟ್ಟಿದ್ದ ಅಮೆರಿಕದ ಬ್ಲಾಕ್ ಮತ್ತು ಗೋಲ್ಡ್ ಕಾರ್ನ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಒಂದು ತೆನೆಗೆ 2000 ರೂ.ಗಳಂತೆ 3 ತೆನೆ ತಂದಿದ್ದು, 10 ಗುಂಟೆಯಲ್ಲಿ ಬಿತ್ತನೆ ಮಾಡಿದ್ದಾರೆ. ಐದು ತಿಂಗಳಲ್ಲಿ ತೆನೆ ಬಂದಿದ್ದು, ಕಡುಕಪ್ಪು,ಗೋಲ್ಡ್ ನೊಂದಿಗೆ ಕೆಂಪು ಮಿಶ್ರಿತ ಕಾಳುಗಳಿವೆ. ಯಾವುದೇ ರಾಸಾಯನಿಕ ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕಂತೂ ಇಳುವರಿಯನ್ನು ಎಲ್ಲಿಯೂ ಮಾರಾಟ ಮಾಡಿಲ್ಲ, ಅದರಲ್ಲಿನ ಬೀಜಗಳನ್ನು 2 ಎಕರೆ ಪ್ರದೇಶದಲ್ಲಿ ಬಿತ್ತಲು ವ್ಯವಸ್ಥೆ ಮಾಡಿಕೊಂಡಿದ್ದು, ತಜ್ಞರ ಸಲಹೆ ಪಡೆಯಲು ನಿರ್ಧರಿಸಿದ್ದಾರೆ.

ಕೃಷಿ ಅಧಿಕಾರಿಗಳ ಭೇಟಿ: ಬ್ಲಾಕ್ ಕಾರ್ನ ಬೆಳೆದ ಪ್ರದೇಶಕ್ಕೆ ಕೃಷಿ ಅಧಿಕಾರಿ ಬಿ.ಹರೀಶ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಸ್ಯಾಂಪಲ್‌ನ್ನು ಪಡೆದುಕೊಂಡಿದೆ. ಮೆಕ್ಸಿಕೋ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ಇಲಾಖೆ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ವಿಟಮಿನ್‌ಗಳ ವರದಿ ಪಡೆಯುತ್ತೇವೆ ಎಂದು ತಂಡ ತಿಳಿಸಿದೆ. ಸದ್ಯಕ್ಕಂತು ಬೆಂಗಳೂರಿನಲ್ಲಿ ಮಾರುಕಟ್ಟೆಯಿದ್ದು, ಇಲಾಖೆ ವರದಿ ಬಂದ ನಂತರ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಬಿ.ಹರೀಶ್ ಮಾಹಿತಿ ನೀಡಿದ್ದಾರೆ. ಪ್ರಾಯೋಗಿಕವಾಗಿ ಯಾವುದೇ ರಾಸಾಯನಿಕ ಬಳಸಿಲ್ಲ, 2 ಎಕರೆ ಪ್ರದೇಶದಲ್ಲಿ ಬಿತ್ತಿದ ನಂತರ ರಾಸಾಯನಿಕ ಗೊಬ್ಬರದ ಜತೆಗೆ ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಅನುಸರಿಸಲಾಗುವುದ ಎಂದು ರೈತ ಲಕ್ಷ್ಮಣ ಪೂಜಾರಿ ತಿಳಿಸಿದ್ದಾರೆ.

ಭರಪೂರ ಜೀವ ಸತ್ವ: ಬೋರವೆಲ್ ಆಧಾರಿತ ಎಚ್.ಜಿ.ರಾಮುಲು ನಗರ ಸುತ್ತಮುತ್ತಲೂ ಭತ್ತ ಬೆಳೆಯುತ್ತಿದ್ದು, ಅಪರೂಪದ ಮೆಕ್ಕೆಜೋಳ ಆಯ್ಕೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಕೇಸರಹಟ್ಟಿ ಭಾಗದಲ್ಲಿ ಟರ್ಕಿ ದೇಶದ ಸಜ್ಜೆ ಬೆಳೆದಿದ್ದು ವಿಶೇಷವಾಗಿತ್ತು. ಬ್ಲಾಕ್ ಮತ್ತು ಗೋಲ್ಡ್ ಕಾರ್ನ್‌ನಲ್ಲಿ ಕಬ್ಬಿಣಾಂಶ ಪ್ರಮಾಣ ಹೆಚ್ಚಿದ್ದು, ರಕ್ತ ಹೀನತೆ ನಿವಾರಣೆಗೆ ನೆರವಾಗಲಿದೆ. ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿದ್ದು, ಇನ್ನಷ್ಟು ಪೋಷಕಾಂಶಗಳ ಬಗ್ಗ್ಗೆ ಮಾಹಿತಿ ಪಡೆಯುವ ಅಗತ್ಯವಿದೆ. ಪರ್ಯಾಯ ಬೆಳೆಗಳತ್ತ ವಾಲುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಭತ್ತದಿಂದ ಹಾಳಾಗಿರುವ ಮಣ್ಣಿನ ಸತ್ವ ಹೆಚ್ಚಿಸಬೇಕಿದೆ.

ಅಪರೂಪದ ವಿದೇಶಿ ಮೂಲದ ಕಪ್ಪು ಮತ್ತು ಗೋಲ್ಡ್ ಕಾರ್ನ್ (ಮೆಕ್ಕೆಜೋಳ) ಎಚ್.ಜಿ.ರಾಮುಲು ನಗರದಲ್ಲಿ ಬೆಳೆಯಲಾಗಿದ್ದು, ಜೀವಸತ್ವಗಳ ಮಾಹಿತಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದೇವೆ. ವರದಿ ಬಂದ ನಂತರ ಬೆಳೆಯಲು ಶಿಾರಸು ಮಾಡಲಾಗುವುದು.

ಬಿ.ಹರೀಶ

ಕೃಷಿ ಅಧಿಕಾರಿ, ವೆಂಕಟಗಿರಿ ರೈತ ಸಂಪರ್ಕ ಅಧಿಕಾರಿ

ಪ್ರಾಯೋಗಿಕವಾಗಿ 10 ಗುಂಟೆಯಲ್ಲಿ ಅಮೇರಿಕದ ಮೆಕ್ಕೆಜೋಳ ಬೆಳೆದಿದ್ದು, 200 ತೆನೆಗಳು ಫಸಲು ಬಂದಿದೆ. ಇನ್ನಷ್ಟು ಎಕೆರೆಯಲ್ಲಿ ಬೆಳೆಯನ್ನು ವಿಸ್ತರಿಸಲು ಆಲೋಚಿಸಿರುವೆ. ಪಟ್ಟಣ ಪ್ರದೇಶದಲ್ಲಿ ಮಾರುಕಟ್ಟೆ ವ್ಯವಸ್ಥೆಯಿದ್ದು, ಕೃಷಿ ತಜ್ಞರ ಸಲಹೆ ಪಡೆಯಲಾಗುವುದು.

ಲಕ್ಷ್ಮಣ ಪೂಜಾರಿ

ರೈತ ಎಚ್.ಜಿ.ರಾಮುಲು ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net