

ಗಂಗಾವತಿ: ಮೂಲ ನಿವಾಸಿಗಳಾದ ಬಹುಜನರ ಬದುಕಿಗೆ ಆತ್ಮಗೌರವ ತಂದುಕೊಟ್ಟ ಭೀಮಾ ಕೋರೆಗಾಂವ್ ಸಂಗ್ರಾಮ ಅವಿಸ್ಮರಣೀಯವಾಗಿದೆ ಎಂದು ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ ಜಿಲ್ಲಾ ಸಂಚಾಲಕ ಮರಿಯಪ್ಪ ಕುಂಟೋಜಿ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತನಾಡಿದರು. 1818ರಲ್ಲಿ ನಡೆದ ಭೀಮಾ ಕೋರೆಗಾಂವ್ ಸಂಗ್ರಾಮ, ಮೇಲ್ಜಾತಿ ಪೇಶ್ವೆಗಳ ಆಳ್ವಿಕೆಯಲ್ಲಿದ್ದ ಮಹಾರ್ ಸಮುದಾಯದ ಜನರ ಬದುಕು ಸಾಕ್ಷೀಕರಿಸಿದ್ದು, ದೌರ್ಜನ್ಯ, ಜಾತೀಯತೆ ಮತ್ತು ಅಸ್ಪಶ್ಯತೆ ವಿರುದ್ಧದ ಸ್ವಾಭಿಮಾನದ ಹೋರಾಟವಾಗಿತ್ತು. 500 ಮಹಾರ್ ಸೈನಿಕರು ಎದೆಕೊಟ್ಟು 28000 ಪೇಶ್ವೆಗಳ ವಿರುದ್ಧ ಸೆಣಸಾಡಿದ್ದರು. ಹೋರಾಟದ ಸ್ಮರಣೆಗಾಗಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.
ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ಮಾಜಿ ಸದಸ್ಯ ಚಂದ್ರಪ್ಪ ಉಪ್ಪಾರ್, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ದಲಿತಪರ ವಿವಿಧ ಸಂಘಟನೆ ಪದಾಧಿಕಾರಿಗಳಾದ ಡಿ.ಭೋಜಪ್ಪ, ಕಂಠೆಪ್ಪ ಹಣವಾಳ, ಮಾಗಿ ಹುಲುಗಪ್ಪ, ರಂಗಪ್ಪ, ಬಸವರಾಜ ಚಲುವಾದಿ, ಆರ್ತಿ ರವಿಬಾಬು, ಮಾಸ್ಟರ್ ಹುಲುಗಪ್ಪ, ಹಂಪೇಶ ಹರಿಗೋಲು, ವೀರೇಶ ಆರತಿ, ಡಿ.ಹನುಮಂತ, ರಾಮಣ್ಣ ತೆಗ್ಗಿನಮನಿ, ಕೆ.ತಿಮ್ಮಣ್ಣ, ವಸಂತರಾವ್ ಸಣಾಪುರ, ಪರಮಾನಂದ ರಾಂಪುರ, ಗಾಲಿ ರಾಮಣ್ಣ, ತಿಮ್ಮಣ್ಣ ಹಂಚಿನಾಳ, ರವಿ ಸೋಮನಾಳ, ತಿಪ್ಪಣ್ಣ ಕೊರವರ ಇತರರಿದ್ದರು.