

ಗಂಗಾವತಿ: ಭಾರತ ಸೇವಾದಳ ಸಪ್ತಾಹ ನಿಮಿತ್ತ ತ್ರಿವಳಿ ತಾಲೂಕಿನ ವಿವಿಧ ಶಾಲೆಗಳಲ್ಲಿ ರಾಷ್ಟ್ರಧ್ವಜ ಮತ್ತು ಸ್ವಾತಂತ್ರ್ಯ ಹೋರಾಟದ ಕುರಿತು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಸೇವಾದಳ ತಾಲೂಕು ಘಟಕದ ಅಧಿನಾಯಕ ಶಿವಾನಂದ ತಿಮ್ಮಾಪುರ ಹೇಳಿದರು.
ನಗರದ ಭಾರತ ಸೇವಾದಳದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಡಿ.29 ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ವಿವಿಧ ಶಾಲೆಗಳಲ್ಲಿ ರಾಷ್ಟ್ರ ಧ್ವಜದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಭಾವೈಕ್ಯ ಮತ್ತು ರಾಷ್ಟ್ರೀಯತೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ತಾಲೂಕು ಘಟಕದ ಅಧ್ಯಕ್ಷ ಸುರೇಶ ಸಿಂಗನಾಳ್ ಮಾತನಾಡಿ, ಸಪ್ತಾಹ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸ್ವಾತಂತ್ರ್ಯ ಹೋರಾಟದ ಕುರಿತು ಉಪನ್ಯಾಸ, ಧ್ವಜ ಶಿಬಿರ, ಚಿತ್ರಕಲಾ, ಗಾಯನ, ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ಕಾರಟಗಿ, ಬಸಾಪಟ್ಟಣ, ಕನಕಗಿರಿ, ಆರಾಳ್, ಸಿದ್ದಾಪುರ ಮತ್ತು ಕೇಸರಹಟ್ಟಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಪ್ರಧಾನ ಕಾರ್ಯದರ್ಶಿ ಅಮರೇಶ ಮೈಲಾಪುರ ಇತರರಿದ್ದರು.