ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲೆತ್ನಿಸಿದವರ ವಿರುದ್ಧ ಪಿಐ ಗರಂ

261120 Gangavati Labor Organation Protest
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಗುರುವಾರ ಕರೆ ನೀಡಿದ್ದ ಗಂಗಾವತಿಯಲ್ಲಿ ಬಂದ್ ಸಂದರ್ಭದಲ್ಲಿ ಬಲವಂತವಾಗಿ ಬಂದ್ ಮಾಡಿಸಲೆತ್ನಿಸಿದ ಸಂಘಟನೆ ಸದಸ್ಯರನ್ನು ನಗರ ಪಿಐ ವೆಂಕಟಸ್ವಾಮಿ ತರಾಟೆಗೆ ತೆಗೆದುಕೊಂಡರು.
Published on

ಗಂಗಾವತಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಶಿಕ್ಷಣ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಗುರುವಾರ ಕರೆ ನೀಡಿದ್ದ ಗಂಗಾವತಿ ಬಂದ್ ವಿಲವಾಗಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬೆಳಗ್ಗೆಯಿಂದಲೇ ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಲೆತ್ನಿಸಿದ ಕಾರ್ಮಿಕ ಸಂಘಟನೆ ಸದಸ್ಯರಿಗೆ ನಗರ ಪಿಐ ವೆಂಕಟಸ್ವಾಮಿ ಕ್ಲಾಸ್ ತೆಗೆದುಕೊಂಡರಲ್ಲದೆ, ಪ್ರಕರಣ ದಾಖಲಿಸುವ ಬಗ್ಗೆ ಸೂಚನೆ ನೀಡಿದ್ದರಿಂದ ಬಂದ್ ಕೈಬಿಟ್ಟರು. ಮಾರುಕಟ್ಟೆಗೆ ವಾರದ ರಜೆ ಹಿನ್ನೆಲೆಯಲ್ಲಿ ಅಂಗಡಿಗಳು ಬಂದ್ ಆಗಿದ್ದು, ಬಸ್ ಸಂಚಾರ, ಬೀದಿ ವ್ಯಾಪಾರಿಗಳು ಮತ್ತು ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ವಿವಿಧ ಸಂಘಟನೆ ಕಾರ್ಯಕರ್ತರು ನಗರದ ಸಿಬಿಎಸ್ ವೃತ್ತದಿಂದ ಶ್ರೀಕೃಷ್ಣ ದೇವರಾಯ ವೃತ್ತದವರಿಗೂ ಪ್ರತಿಭಟನೆ ರ‌್ಯಾಲಿ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ರೇಣುಕಾರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮತ್ತು ಎಐಸಿಸಿಟಿಯು ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಮಾತನಾಡಿ, ಕಾರ್ಪೋರೇಟ್ ಕಂಪನಿಗಳಿಗೆ ಸರ್ಕಾರ ಮಣೆ ಹಾಕಿದ್ದರಿಂದ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದು, ಕಾಯ್ದೆ ತಿದ್ದುಪಡಿ ಮೂಲಕ ಖಾಸಗೀಕರಣದ ಹುನ್ನಾರ ನಡೆಸಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧ ಖಾತರಿ ಪಡಿಸುವಲ್ಲಿ ಸರ್ಕಾರ ವಿಲವಾಗಿದೆ. ಶಿಕ್ಷಣದ ನೀತಿ ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟಿದ್ದು, ಬಡ ಜನರಿಗೆ ಶಿಕ್ಷಣ ದೊರಕುವುದು ಅಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತಾವಧಿಯಲ್ಲಿ ಜಾರಿಗೆ ತಂದ ಕಾರ್ಮಿಕ, ರೈತ, ಶಿಕ್ಷಣ ವಿರೋಧಿ ನೀತಿ ಕೈಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ, ದುರುಗಮ್ಮ ಹೊಸ್ಕೇರಿ, ಶ್ರೀನಿವಾಸ ಹೊಸಳ್ಳಿ, ಶರಣು ಪಾಟೀಲ್, ಶಿವಣ್ಣ ಬೆಣಕಲ್, ಕೃಷ್ಣಪ್ಪ ನಾಯಕ, ಟಿ.ನಬೀಸಾಬ್, ಬಾಳಪ್ಪ ಹುಲಿಹೈದರ್, ನಾಗೇಶ ನಾಯಕ, ಕೃಷ್ಣಸ್ವಾಮಿ, ಬಾಲಪ್ಪ ಸೇರಿ ಸಿಪಿಐ(ಎಂ), ಎಐಸಿಸಿಟಿಯ, ಸಿಐಟಿಯು, ಕೆಪಿಆರ್‌ಎಸ್, ಎಐಎಡಬ್ಲುೃಯು, ಅಂಗನವಾಡಿ, ಆಶಾಕಾರ್ಯಕರ್ತೆಯರು ಮತ್ತು ಬಿಸಿಯೂಟ ನೌಕರರ ಸಂಘದ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net