

ಗಂಗಾವತಿ: ಪಕ್ಷದಲ್ಲಿ ಕೆಲವರ ಏಕಪಕ್ಷೀಯ ನಿರ್ಣಯಕ್ಕೆ ಬೇಸತ್ತು ನಾನು ಹಾಗೂ ಬೆಂಬಲಿಗರು ಸಾಮೂಹಿಕ ರಾಜೀನಾಮೆ ನೀಡಿದ್ದೇವೆ ಎಂದು ಕನಕಗಿರಿ ಕ್ಷೇತ್ರದ ಆಪ್ ಅಧ್ಯಕ್ಷ ರಮೇಶ ಕೋಟಿ ಹೇಳಿದರು.
ನಗರದ ಆಮ್ ಆದ್ಮಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಹುಸೇನ್‌ಸಾಬ್ ಗಂಗನಾಳ್‌ಗೆ ರಾಜೀನಾಮೆ ಸಲ್ಲಿಸಿ ಮಾತನಾಡಿದರು. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ವರ್ಷದಿಂದ ದುಡಿದಿದ್ದು, ಸಂಘಟನೆ ಪರಿಗಣಿಸಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಪಕ್ಷದ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ್ದು, ಸಮಾಧಾನ ತಂದಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಕನಕಗಿರಿ ಪ್ರಬಲ ಆಕಾಂಕ್ಷಿಯಾಗಿದ್ದು, ಅದರಂತೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ತೆರಳಿ ಸಭೆ ನಡೆಸಿದ್ದೇನೆ. ಪಕ್ಷವೂ ಅಭ್ಯರ್ಥಿಯನ್ನಾಗಿ ೋಷಿಸುವುದಾಗಿ ಭರವಸೆ ನೀಡಿತ್ತು.
ಆದರೆ ಹಣದ ಪ್ರಾಬಲ್ಯಕ್ಕೆ ಮಣಿದು ಹೊರಗಿನವರಿಗೆ ಅವಕಾಶ ನೀಡಿದೆ. ಪಕ್ಷಕ್ಕಾಗಿ ದುಡಿದು ಹಣ ಹಾಗೂ ಸಮಯ ವ್ಯರ್ಥ ಮಾಡಿಕೊಂಡಿದ್ದೇನೆ. ನನ್ನೊಂದಿಗೆ 150ಕ್ಕೂ ಹೆಚ್ಚು ಬೆಂಬಲಿಗರು ರಾಜೀನಾಮೆ ನೀಡಿದ್ದು, ಶೀಘ್ರವೇ ಸಭೆ ಆಯೋಜಿಸಿ ಮುಂದಿನ ರಾಜಕೀಯ ನಡೆ ನಿರ್ಧರಿಸಲಾಗುವುದು ಎಂದರು. ಬೆಂಬಲಿಗರಾದ ತಿರುಪತಿ ಸಿಂಗನಾಳ್, ಜಿಲಾನಾ ಬಾಷಾ, ಶರಣಪ್ಪ ಭೋವಿ, ಶ್ರೀಕಾಂತ ಆರಾಳ್, ಮನೋಜ್ ಕನಕಗಿರಿ, ಯುವರಾಜ್, ಭೀಮನಗೌಡ ಇತರರಿದ್ದರು.
ಇದನ್ನೂ ಓದಿ: ನಿರ್ಭಯವಾಗಿ ಮತದಾನ ಮಾಡಿ