

ಗಂಗಾವತಿ: ಕಾರ್ಮಿಕ ವಿರೋಧಿ ಸಂಹಿತೆ ಹಿಂಪಡೆಯುವಂತೆ ಒತ್ತಾಯಿಸಿ ನಗರದ ಸಿಬಿಎಸ್ ವೃತ್ತದಲ್ಲಿ ಸಂಚಾರ ತಡೆ ಪ್ರತಿಭಟನೆ ನಡೆಸಲೆತ್ನಿಸಿದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಿಐಟಿಯು ಮತ್ತು ಇತರೆ ಅಂಗ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬುಧವಾರ ಬಂಧಿಸಿದರು.
ಸಾರ್ವತ್ರಿಕ ಮುಷ್ಕರ ಭಾಗವಾಗಿ ನಗರದ ಎಪಿಎಂಸಿ ಕಚೇರಿಯಿಂದ ಪ್ರತಿಭಟನೆ ರ‌್ಯಾಲಿ ಮೂಲಕ ಸಿಬಿಎಸ್ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು ಸಂಚಾರ ತಡೆ ನಡೆಸಲೆತ್ನಿಸಿದರು. ಪ್ರತಿಭಟನೆ ನಿರತ 45 ಕಾರ್ಯಕರ್ತರು ಪೊಲೀಸರು ಬಂಧಿಸಿದರಲ್ಲದೇ, ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ಯದರು. ಬಂಧನ ಖಂಡಿಸಿ ಇತರೆ ಕಾರ್ಯಕರ್ತರು ಸಿಬಿಎಸ್ ವೃತ್ತದಿಂದ ಠಾಣೆವರಿಗೂ ಆಗಮಿಸಿ ಪ್ರತಿಭಟಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರ, ಕಾರ್ಮಿಕರಿಗೆ ಮಾರಕವಾದ ಸಂಹಿತೆಗಳನ್ನು ಜಾರಿಗೊಳಿಸುತ್ತಿದೆ. ದುಡಿವ ಅವಧಿ 8 ಗಂಟೆ ಬದಲು 12 ಗಂಟೆಗೆ ಹೆಚ್ಚಿಸುವ ಮೂಲಕ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಹಲವು ವರ್ಷಗಳ ಬೇಡಿಕೆ ಸ್ಪಂದಿಸದ ಸರ್ಕಾರ, ಸಂಘಟನೆ ಹತ್ತಿಕ್ಕುವ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಮಂಟನಗೌಡ, ಮಂಜುನಾಥ ಡಗ್ಗಿ, ಬಸವರಾಜ ಮರಕುಂಬಿ, ಹುಸೇನಪ್ಪ, ಶಿವಣ್ಣ ಬೆಣಕಲ್, ಶ್ರೀನಿವಾಸ ಹೊಸಳ್ಳಿ, ಮುತ್ತಣ್ಣ, ಲಕ್ಷ್ಮಿದೇವಿ ಸೋನಾರ್, ಹುಲಿಗೆಮ್ಮ, ದುರುಗಮ್ಮ, ಗಿರಿಜಮ್ಮ, ಕೃಷ್ಣಪ್ಪ ನಾಯಕ, ಗ್ಯಾನೇಶ ಕಡಗದ್, ಎ.ಬಸವರಾಜ್, ಲಿಂಗರಾಜ್, ಚೇತನಕುಮಾರ ಸೇರಿ, ಸಿಐಟಿಯು, ಸಿಪಿಐ(ಎಂ), ಕೆಪಿಆರ್‌ಎಸ್, ಎಐಎಡಬ್ಲುೃಯು, ಎಸ್‌ಎ್ಐ, ಅಂಗನವಾಡಿ, ಅನ್ನದಾಸೋಹ ಸಂಘಟನೆ ಕಾರ್ಯಕರ್ತರಿದ್ದರು.