

ಗಂಗಾವತಿ: ಭಕ್ತರ ಅನುಕೂಲಕ್ಕೆ ತಕ್ಕಂತೆ ಅಂಜನಾದ್ರಿ ಬೆಟ್ಟದಲ್ಲಿ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಸಂಘಟನೆಗಳು ನೆರವಾಗುವಂತೆ ಸಂಸದ ರಾಜಶೇಖರ್ ಹಿಟ್ನಾಳ್ ಮನವಿ ಮಾಡಿದರು.
ನಗರದ ಸರ್ಕೀಟ್‌ಹೌಸ್‌ನಲ್ಲಿ ಹಿಂದುಪರ ಸಂಘಟನೆಗಳೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮ ಯಶಸ್ಸಿಗೆ ಈಗಾಗಲೇ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿದ್ದು, ಸಿದ್ಧತೆ ಶುರುವಾಗಿದೆ.
ಕ್ಷೇತ್ರದಲ್ಲಿ ಅಂಜನಾದ್ರಿ ಬೆಟ್ಟವಿರುವುದು ನಮ್ಮ ಸುದೈವ. ಹೀಗಾಗಿ ಧಾರ್ಮಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ಯಶಸ್ವಿಗೊಳಿಸಬೇಕಿದೆ. ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಕುಡಿವ ನೀರು ಮತ್ತು ಸ್ನಾನದ ಕೊಳಾಯಿ ಹಾಕುವ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ವಿಶ್ವಾಸದೊಂದಿಗೆ ಕಾರ್ಯಕ್ರಮ ನೆರವೇರಿಸಲಾಗುವುದು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತಂದರೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಾಲಯದಲ್ಲಿ ಹೂವಿನ ಅಲಂಕಾರ, ತೆಂಗಿನಕಾಯಿ, ಮಾಲಾವಿಸರ್ಜನೆ ಸಲಕರಣೆ ಹಾಕಲು ಬ್ಯಾರೆಲ್‌ಗಳ ವ್ಯವಸ್ಥೆ, ಪ್ರಸಾದ ವಿತರಣೆಗೆ ಸ್ವಯಂ ಸೇವಕರ ನೇಮಕ, ಪಾದಯಾತ್ರೆಗಳ ಅನುಕೂಲಕ್ಕೆ ರಸ್ತೆಬದಿಯಲ್ಲಿ ಬೆಳಕಿನ ವ್ಯವಸ್ಥೆ, ದೇವಾಲಯದಿಂದ ಪ್ರಸಾದ ಸ್ಥಳಕ್ಕೆ ತೆರಳಲು ಬಸ್‌ಗಳ ಸಂಚಾರ ಸೇರಿ ಹಲವು ವ್ಯವಸ್ಥೆ ಕೈಗೊಳ್ಳುವಂತೆ ಭಜರಂಗ ದಳ ಜಿಲ್ಲಾ ಕಾರ್ಯದರ್ಶಿ ವಿನಯ್ ಪಾಟೀಲ್ ಮನವಿ ಮಾಡಿದರು.
ಎಸಿ ಕ್ಯಾ.ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರೇಷ್ಮಾ ಹಾನಗಲ್, ತಹಸೀಲ್ದಾರ್ ವಿಶ್ವನಾಥ ಮುರಡಿ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಅಂಜನಾದ್ರಿ ಬೆಟ್ಟದ ಸಿಇಒ ಪ್ರಕಾಶರಾವ್, ತಾಪಂ ಇಒ ಲಕ್ಷ್ಮೀದೇವಿ ಯಾದವ್, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಜಿಪಂ ಎಇಇ ವಿಜಯಕುಮಾರ, ಜೆಸ್ಕಾಂ ಎಇಇ ಮಂಜುನಾಥ, ಹಿಂದುಪರ ಸಂಘಟನೆ ಪದಾಧಿಕಾರಿಗಳಾದ ವಿಠ್ಠಲನಾವಡೆ, ಮೌನೇಶ, ಸಂಗಮೇಶ ಇತರರಿದ್ದರು.