

ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಎಂಪಿ ರಾಜಶೇಖರ ಹಿಟ್ನಾಳ್ ಮಂಗಳವಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡರು.
ಅರಣ್ಯ, ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಬೆಟ್ಟಕ್ಕೆ ಬಂದಿದ್ದ ಎಂಪಿ ರಾಜಶೇಖರ್ ಹಿಟ್ನಾಳ್, ಬೆಟ್ಟ ಹತ್ತಿ ಆಂಜನೇಯನ ದರುಶನ ಪಡೆದುಕೊಂಡರು. ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಟ್ಟದ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮತ್ತು ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಿರ್ಮಾಣವಾಗುತ್ತಿರುವ ಯಾತ್ರಾ ನಿವಾಸಕ್ಕೆ ತೆರಳಿ ಕಾಮಗಾರಿ ವೀಕ್ಷಿಸಿದರು.
ರೋಪವೇ ನೀಲನಕ್ಷೆಯ ಮಾಹಿತಿಯನ್ನು ಪಡೆದುಕೊಂಡರಲ್ಲದೇ, ಚಿಕ್ಕರಾಂಪುರದ ವೇದಪಾಠ ಶಾಲೆಯ ಬಳಿ ಜಾಗವನ್ನು ವೀಕ್ಷಿಸಿದರು. ಅಂಜನಾದ್ರಿ ಬೆಟ್ಟದ ಸುತ್ತಲೂ ತಲೆ ಎತ್ತಿರುವ ಅನಧಿಕೃತ ರೆಸಾರ್ಟ್‌ಗಳ ಮಾಹಿತಿ ಪಡೆದುಕೊಂಡರು. ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಿದ್ದು, ಭಕ್ತಾದಿಗಳಿಗೆ ಮೂಲ ಸೌಕರ್ಯ ಒದಗಿಸುವ ಯೋಜನೆ ರೂಪಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಎಂಪಿ ರಾಜಶೇಖರ ಹಿಟ್ನಾಳ್ ಹೇಳಿದರು.
ರಾಜವಂಶಸ್ಥೆ ಲಲಿತಾರಾಣಿರಾಯಲು, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಚ್.ಮುಲ್ಲಾ, ದೇವಾಲಯದ ಸಿಇಒ ಪ್ರಕಾಶರಾವ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ವ್ಯವಸ್ಥಾಪಕ ಎಂ.ವೆಂಕಟೇಶ ಇತರರಿದ್ದರು.