ನವವೃಂದಾವನಗಡ್ಡಿ ಸಂಪರ್ಕ ಕಡಿತ

Gangavathi tungabhadra river
ತುಂಗಭದ್ರಾ ಜಲಾಶಯದ 19ನೇ ಗೇಟ್ ಮುರಿದ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಭಾನುವಾರ ಹರಿಬಿಟ್ಟಿದ್ದರಿಂದ ಗಂಗಾವತಿ ತಾಲೂಕಿನ ಶ್ರೀಕೃಷ್ಣದೇವರಾಯ ಶಿಲಾಮಂಟಪ ಮುಳುಗುವ ಹಂತದಲ್ಲಿರುವುದು.
Published on

ಗಂಗಾವತಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಭಾನುವಾರ ಹರಿಬಿಟ್ಟಿದ್ದು, ತಾಲೂಕಿನ ನದಿ ಪಾತ್ರದಲ್ಲಿ ಕಟ್ಟೆಚ್ಚರವಹಿಸಲಾಗಿದೆ.

ಶನಿವಾರ ಮಧ್ಯರಾತ್ರಿಯಿಂದಲೇ ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದ್ದು, ಕಡಿಮೆಯಾಗಿದ್ದ ಪ್ರವಾಹ ಮತ್ತೆ ಹೆಚ್ಚಾಗಿದೆ. ಸಣಾಪುರ, ಹನುಮನಹಳ್ಳಿ, ವಿರುಪಾಪುರಗಡ್ಡಿ, ಆನೆಗೊಂದಿ, ಗೂಗಿಬಂಡಿ ಕ್ಯಾಂಪ್, ದೇವಘಾಟ, ವಿಪ್ರ, ಸಿಂಗನಗುಂಡು, ಅಯೋಧ್ಯಾ, ಚಿಕ್ಕಜಂತಕಲ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ.

ಆನೆಗೊಂದಿಯ ಶ್ರೀಕೃಷ್ಣದೇವರಾಯ ಶಿಲಾಮಂಟಪ ಭಾಗಶಃ ಮುಳುಗಿದ್ದು, ನದಿ ದಂಡೆ ಬಳಿಯ ಭತ್ತದ ಗದ್ದೆಗಳಿಗೆ ನೀರು ಹರಿದು ಬರುತ್ತಿವೆ. ನೀರಿನ ಪ್ರಮಾಣ ಕಡಿಯಾಗುತ್ತಿದ್ದಂತೆ ಮೀನುಗಾರರ ಚಟುವಟಿಕೆ ಶುರುವಾಗಿತ್ತು. ಮತ್ತೆ ನೀರು ಬಿಟ್ಟಿದ್ದರಿಂದ ಮೀನುಗಾರಿಕೆ, ಹರಿಗೋಲು ಮತ್ತು ಯಾಂತ್ರಿಕ ದೋಣಿ ಹಾಕುವುದನ್ನು ನಿಷೇಧಿಸಲಾಗಿದೆ. ಹನುಮನಹಳ್ಳಿಯ ಋಷ್ಯಮುಖ, ವಿರುಪಾಪುರಗಡ್ಡಿ, ತಳವಾರ ಘಟ್ಟ ನವವೃಂದಾವನಗಡ್ಡಿ, ಹಳೇ ಕರಿಯಮ್ಮನಗಡ್ಡಿ ಸಂಪರ್ಕ ಕಡಿತಗೊಂಡಿದೆ.

ಅಧಿಕಾರಿಗಳ ಭೇಟಿ: ತಾಲೂಕಿನ ಆನೆಗೊಂದಿ ವ್ಯಾಪ್ತಿಯ ನದಿ ತೀರಕ್ಕೆ ಕಂದಾಯ ನಿರೀಕ್ಷಕ ಬಶೀರುದ್ದೀನ್, ಗ್ರಾಮಾಡಳಿತಾಧಿಕಾರಿ ಮಹಾಲಕ್ಷ್ಮೀ ನಾಯಕ, ಗ್ರಾಮ ಸಹಾಯಕ ಹನುಮೇಶ ಇತರರು ಭೇಟಿ ನೀಡಿದ್ದು, ಕಟ್ಟೆಚ್ಚರವಹಿಸಿದ್ದಾರೆ. ನದಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಪ್ರವಾಹ ಪೀಡಿತ 18 ಗ್ರಾಮಗಳಲ್ಲಿ ಗ್ರಾಪಂ ನೆರವಿನೊಂದಿಗೆ ಡಂಗೂರ ಸಾರಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net