

ಗಂಗಾವತಿ: ತಾಲೂಕಿನ ಸಣಾಪುರದ ಸ.ನಂ.6ರ ತೆರವಿನಿಂದ ಅನ್ಯಾಯಕ್ಕೊಳಗಾದ ನಿವಾಸಿಗಳಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ಸದಸ್ಯರು ತಾಲೂಕಿನ ಸಣಾಪುರ ಗ್ರಾಪಂ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಪಿಡಿಒ ವತ್ಸಲಾಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಎ.ಹುಲುಗಪ್ಪ ಮಾತನಾಡಿ, ಸಣಾಪುರದ ಸ.ನಂ.6ರಲ್ಲಿನ 18.30 ಎಕರೆ ಭೂಮಿಯ 1.20 ಎಕರೆ ಪ್ರದೇಶದಲ್ಲಿ 20 ವರ್ಷಗಳಿಂದ ನಿವಾಸಿಗಳು ವಾಸಿಸುತ್ತಿದ್ದು, ಇತ್ತೀಚಿಗೆ ಕೆಲವರು ನಿವಾಸಿಗಳನ್ನು ತೆರವುಗೊಳಿಸಿದ್ದಾರೆ.
ಖಾಸಗಿ ಒಡೆತನಕ್ಕೆ ಉದ್ದೇಶಿತ ಜಾಗ ನೀಡುವ ಸಲುವಾಗಿ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈ ಬಗ್ಗೆ ಗ್ರಾಪಂ ಗಮನಕ್ಕಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ವಸತಿ ರಹಿತರಿಗೆ ಜಾಗ ನೀಡಬೇಕು ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ, ಪದಾಧಿಕಾರಿಗಳಾದ ಮಂಜುನಾಥ, ಶೇಷಪ್ಪ, ಶೇಖಮ್ಮ, ಗಂಗಮ್ಮ ಇತರರಿದ್ದರು.