

ಗಂಗಾವತಿ: ನಗರ ಮತ್ತು ತಾಲೂಕಿನಾದ್ಯಂತ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರುಗಳಿಗೆ ವಿದಾಯ ಹೇಳುವ ಮೂಲಕ ಪ್ರಸಕ್ತ ಸಾಲಿನ ಮೊಹರಂ ಹಬ್ಬಕ್ಕೆ ಬುಧವಾರ ತೆರೆ ಎಳೆಯಲಾಯಿತು.
ನಗರದ ಕಂದಗಲ್, ಅಣ್ಣಿಗೇರಿ, ಅಣ್ಣೂರು ಗೌರಮ್ಮ, ಪಿಂಜಾರವಾಡಾ, ಮುಜಾವರನಗರ, ಇಸ್ಲಾಂಪುರ, ಬಂಬೂಬಜಾರ್, ಬನ್ನಿಗಿಡದ ಕ್ಯಾಂಪ್ ಸೇರಿ ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಲಾಯಿ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ತಾಲೂಕಿನ ವಡ್ಡರಹಟ್ಟಿ, ಬಸಾಪಟ್ಟಣ, ವೆಂಕಟಗಿರಿ ಸೇರಿ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮೊಹರಂ ಆಚರಿಸಲಾಯಿತು.
ದೈವಗಳ ವಿದಾಯದ ಮುನ್ನಾ ದಿನ ಕತ್ತಲ್ ರಾತ್ರಿ ಆಚರಿಸಿದ್ದು, ಅಲಾಯಿ ಕುಣಿಯಲ್ಲಿ ಕೆಂಡ ಹಾಯುವ ಮೂಲಕ ಭಕ್ತರು ಹರಕೆ ಸಲ್ಲಿಸಿದರು. ಯುವಕರು ಹೆಜ್ಜೆ ಕುಣಿತದೊಂದಿಗೆ ಸಂಪ್ರದಾಯ ನೃತ್ಯ ಮಾಡಿದರು. ವಿದಾಯ ದಿನದಂದು ಅಲಾಯಿ ದೇವರುಗಳು ವಿವಿಧ ಮಸೀದಿಗೆ ತೆರಳಿ, ಶುಭಾಶಯ ವಿನಿಮಯ ಮಾಡಿಕೊಂಡಿದ್ದು, ವಡ್ಡರಹಟ್ಟಿಯಲ್ಲಿ ಹಿಂದು ದೇವಾಲಯಕ್ಕೂ ಭೇಟಿ ನೀಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದವು.
ಅಲಾಯಿ ದೇವರುಗಳ ಮೆರವಣಿಗೆಯುದ್ದಕ್ಕೂ ಭಕ್ತರಿಗಾಗಿ ತಂಪು ಪಾನೀಯ, ಮಜ್ಜಿಗೆ, ಹಾಲು ಸೇರಿ ವಿಶೇಷ ಖಾದ್ಯಗಳನ್ನು ವಿತರಿಸಲಾಯಿತು. ಅಲಾಯಿ ಕುಣಿತ ಗಮನಸೆಳೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಪೊಲೀಸ್ ಪಡೆ ನಿಯೋಜಿಸಲಾಗಿತ್ತು.