

ಗಂಗಾವತಿ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಉದ್ದೇಶಿಸಿರುವ 7ನೇ ವೇತನ ಆಯೋಗದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು.
ವೇದಿಕೆ ಕಲ್ಯಾಣ ವಿಭಾಗೀಯ ಸಂಚಾಲಕ ಪರಮಾನಂದ ಶಿವಸಿಂಪರ್ ಮಾತನಾಡಿ, ನಿವತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ಅನ್ಯಾಯವಾಗುತ್ತಿದ್ದು, ನಿವತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.
ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಶನ್ ಮತ್ತು ಗಳಿಕೆ ರಜೆ ನಗದೀಕರಣ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತ ನೀಡುತ್ತಿಲ್ಲ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಗಮನಸೆಳೆದರೂ ಸರ್ಕಾರ ಸ್ಪಂದಿಸಿಲ್ಲ. ಮತ್ತೊಮ್ಮೆ ಪರಿಶೀಲಿಸಿ ನಿವೃತ್ತ ನೌಕರರಿಗಾಗಿರುವ ತಾರತಮ್ಯ ಸರಪಡಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಸುರೇಶ ಪತ್ತಾರ, ಪಂಚಾಕ್ಷರಯ್ಯ, ಎನ್.ಶಿವಪ್ರಸಾದ, ಪರಶುರಾಮ ಕುಷ್ಟಗಿ, ದೇವಪ್ಪ, ದೇವರಾಜ, ನಿರ್ಮಲಮ್ಮ, ಇಮಾಮ್‌ಸಾಬ್ ಮನಿಯಾರ್, ಮಹಾಂತಗೌಡ ಇತರರಿದ್ದರು.