

ಗಂಗಾವತಿ: ಅನಿಷ್ಟ ಪದ್ಧತಿಗಳ ವಿರುದ್ಧ ದಾಸರು ಧ್ವನಿ ಎತ್ತಿದ್ದರು. ಅವರ ಸಾಹಿತ್ಯದಲ್ಲಿ ಬದುಕಿನ ಪರಿವರ್ತನೆ ಕಾಣಬಹುದಾಗಿದೆ ಎಂದು ಡಿಸಿಸಿ ಮಾಜಿ ಅಧ್ಯಕ್ಷೆ ಲಲಿತಾರಾಣಿರಾಯಲು ಹೇಳಿದರು.
ನಗರದ ರಾಯರ ಮಠದ ಸಭಾಂಗಣದಲ್ಲಿ ‘ಶ್ರೀ ಪ್ರಸನ್ನ ವೆಂಕಟದಾಸರು’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೈವ ಸಾಕ್ಷಾತ್ಕಾರ ಪಡೆದುಕೊಂಡ ದಾಸಶ್ರೇಷ್ಠರು, ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಭಕ್ತಿ ಪ್ರಧಾನ ಚಿತ್ರಗಳನ್ನು ಮತ್ತೆ ನಿರ್ಮಿಸುತ್ತಿರುವುದು ಗಮನಾರ್ಹ ಎಂದರು.
ನಟ ಹಾಗೂ ವಕೀಲ ಶರದ್ ದಂಡಿನ್ ಮಾತನಾಡಿ, ಉತ್ತರ ಕರ್ನಾಟಕದ ಭಾಗದ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣವಾಗಿದ್ದು, ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ರಾಜವಂಶಸ್ಥೆ ರಾಣಿ ಮೋಹಿನಿದೇವಿ, ನಗರಸಭೆ ಸದಸ್ಯ ವಾಸುದೇವ ನವಲಿ, ಮಾಜಿ ಸದಸ್ಯ ಸುದರ್ಶನ ಜೋಶಿ, ವಿಪ್ರ ಸಮಾಜದ ಮುಖಂಡರಾದ ನಾರಾಯಣರಾವ್ ವೈದ್ಯ, ಎಚ್.ಕೆ.ಗೋಪಾಲರಾವ್, ವಿಷ್ಣು ತೀರ್ಥ ಜೋಶಿ ಇತರರಿದ್ದರು. ಪತ್ರಕರ್ತ ರಾಮಮೂರ್ತಿ ನವಲಿ ನಿರ್ವಹಿಸಿದರು. ನಂತರ ಜಗನ್ನಾಥ ದಾಸರ ಆರಾಧನೆ ನಿಮಿತ್ತ ಶ್ರೀ ಜಗನ್ನಾಥ ದಾಸರ ಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.