

ಗಂಗಾವತಿ: ಸಂಗೀತ ಕ್ರಿಯಾಶೀಲ ಹಾಗೂ ವಿಸ್ತಾರ ಹೊಂದಿರುವಂತಹ ಕ್ಷೇತ್ರವಾಗಿದೆ ಎಂದು ಕಂದಾಯ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿ ತಹಸೀಲ್ದಾರ್ ರವಿ ಎಸ್.ಅಂಗಡಿ ಹೇಳಿದರು.
ನಗರದ ಪಬ್ಲಿಕ್ ಕ್ಲಬ್ ಆವರಣದ ಅನುಭವ ಮಂಟಪ ವೇದಿಕೆಯಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ವಿದ್ಯಾಲಯ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಅಸೋಸಿಯೇಷನ್ ಬುಧವಾರ ಆಯೋಜಿಸಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದು, ಪ್ರೋತ್ಸಾಹಕರ ಸಂಖ್ಯೆಯೂ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಸಂಗೀತದಿಂದ ಎಲ್ಲ ದೌರ್ಬಲ್ಯಗಳನ್ನು ದೂರ ಮಾಡಲು ಸಾಧ್ಯ ಎಂದರು. ಹಿರಿಯ ಕಲಾವಿದರಾದ ಪಂ.ಅಂಬಯ್ಯ ನುಲಿ, ಮಾನ್ವಿಯ ವಿರೂಪಾಕ್ಷಯ್ಯ ಹಿರೇಮಠ, ಉದ್ಯಮಿ ಸರ್ವೇಶ ಮಾಂತಗೊಂಡರನ್ನು ಸನ್ಮಾನಿಸಲಾಯಿತು.
ಹಿರಿಯ ಕಲಾವಿದರು ಮತ್ತು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕ್ಲಬ್ ಅಧ್ಯಕ್ಷ ಮಹಾಬಳೇಶ ಹಾಸಿನಾಳ್, ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ್, ಕರುಣಾ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ, ಪತ್ರಕರ್ತ ನವಲಿ ರಾಮಮೂರ್ತಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ರಾಮನಾಥ ಭಂಡಾರಕರ್, ಅಶೋಕ ತುಪ್ಪದ್, ಮಂಜುನಾಥ ಹೊಸ್ಕೇರಾ, ವಿಜಯಕುಮಾರ, ರಾಘವೇಂದ್ರ, ವಿನೋದ್ ಇತರರಿದ್ದರು.