ಶ್ರೀರಾಮುಲು ವಿರುದ್ಧದ ಹೇಳಿಕೆ ಹಿಂಪಡೆಯಲಿ

news conference,
ವೀರಭದ್ರಪ್ಪ ನಾಯಕ
Published on

ಗಂಗಾವತಿ: ನಾಯಕ ಸಮುದಾಯದ ಬೆಂಬಲದಿಂದಲೇ ಶಾಸಕ ಗಾಲಿ ಜನಾರ್ದನರೆಡ್ಡಿ ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದು, ಸಮಾಜದ ಮುಖಂಡ ಬಿ.ಶ್ರೀರಾಮುಲು ವಿರುದ್ಧ ನೀಡಿದ ಹೇಳಿಕೆ ಹಿಂಪಡೆಯುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾಧ್ಯಕ್ಷ ಡಬ್ಲುೃ. ವೀರಭದ್ರಪ್ಪ ನಾಯಕ ಒತ್ತಾಯಿಸಿದರು.

ನಗರದ ಪಬ್ಲಿಕ್ ಕ್ಲಬ್‌ನಲ್ಲಿ ನಾಯಕ ಮಹಾಸಭಾದಿಂದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಬಿ.ಶ್ರೀರಾಮುಲುರನ್ನು ಹೊಣೆಯಾಗಿಸುವುದು ಸರಿಯಲ್ಲ. ಆತ್ಮಾವಲೋಕನ ಸಭೆಯಲ್ಲಿ ಪಕ್ಷ ವರಿಷ್ಠರು ರಾಮುಲುರನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ್ದು ಖಂಡನೀಯ.

ಇದೇ ನೆಪವಾಗಿಟ್ಟುಕೊಂಡು ಶಾಸಕ ಗಾಲಿ ಜನಾರ್ದನರೆಡ್ಡಿ ಅವರು, ರಾಮುಲು ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸಮಾಜದ ಮುಖಂಡರ ಬಗ್ಗೆ ಎಚ್ಚರಿಕೆಯಿಂದ ಸಾರ್ವಜನಿಕ ಹೇಳಿಕೆ ನೀಡಬೇಕು. ಈ ಬಗ್ಗೆ ರೆಡ್ಡಿ ಕ್ಷಮೆಯಾಚಿಸಬೇಕು, ಇದೇ ರೀತಿ ಮುಂದುವರಿದರೆ ಸಮಾಜದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಟಿಎಪಿಸಿಎಂಎಸ್ ಸದಸ್ಯ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ರಾಮುಲುರೊಂದಿಗೆ ಬಿಜೆಪಿ ಮುಖಂಡರು ನಡೆದುಕೊಂಡ ರೀತಿ ಖಂಡನೀಯವಾಗಿದ್ದು, ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ರೆಡ್ಡಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ನಾಯಕ ಸಮಾಜದವರ ಶ್ರಮ ಸಾಕಷ್ಟಿದೆ. ಇಲ್ಲಸಲ್ಲದ ಹೇಳಿಕೆ ನೀಡಿ ಸಮುದಾಯದ ಮುಖಂಡರನ್ನು ಅವಮಾನಿಸುವುದು ಸರಿಯಲ್ಲ ಎಂದರು.

ಸಮಾಜದ ಮುಖಂಡರಾದ ಜೋಗದ ಹನುಮಂತಪ್ಪ ನಾಯಕ, ಬಿ.ಕೃಷ್ಣಪ್ಪ ನಾಯಕ, ವೀರಣ್ಣನಾಯಕ, ಶರಣಪ್ಪ ನಾಯಕ, ಅಂಜನಿಗೌಡ, ಎ.ಜೆ.ರಂಗನಾಥ ಸೇರಿ ನಗರ ಮತ್ತು ಗ್ರಾಮೀಣ ಭಾಗದ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net