

ಗಂಗಾವತಿ: ಕಳೆದ ವಿಧಾನಸಭೆ ಚುನಾವಣೆ ವೇಳೆ ಕೆಆರ್‌ಪಿಪಿ ಬೆಂಬಲಿಸಿ ಜನಾರ್ದನರೆಡ್ಡಿ ಗೆಲುವಿಗೆ ಕಾರಣರಾಗಿದ್ದ ಕಾಂಗ್ರೆಸ್ ಮೂಲದ ಸದಸ್ಯರಿಗೆ ನಗರಸಭೆ ಅಧಿಕಾರದ ಗದ್ದುಗೆ ಒಲಿದಿದೆ. ಮೂಲ ಬಿಜೆಪಿಗರು ಒಲ್ಲದ ಮನಸಿನಿಂದಲೇ ಮತದಾನ ಮಾಡಿದ್ದು, ಕಾಂಗ್ರೆಸ್‌ನಿಂದ ಗೆದ್ದು ಆನಂತರ ಅಂತರ ಕಾಯ್ದುಕೊಂಡಿದ್ದ ಮೌಲಸಾಬ್ ದಾದೇಸಾಬ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ದೊಡ್ಮನಿ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಪ್ರಕಟಿಸಿದರು. ಈ ವೇಳೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇದ್ದರು.
ಒಂದೂವರೆ ವರ್ಷದ ನಂತರ ನಗರಸಭೆ ಚುನಾಯಿತ ಸದಸ್ಯರಿಗೆ ಅಧಿಕಾರದ ಭಾಗ್ಯ ದೊರೆತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದವರಿಗೆ ಅದೃಷ್ಟ ಒಲಿದಿದ್ದು, ಅಧಿಕಾರ ಹಿಡಿದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್‌ಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಮೌಲಸಾಬ್ ದಾದೇಸಾಬ್, ಕಾಂಗ್ರೆಸ್‌ನವರಾದ ಎಂಟನೇ ವಾರ್ಡ್‌ನ ಖಾಸಿಂಸಾಬ್ ಗದ್ವಾಲ್, ಉಪಾಧ್ಯಕ್ಷ ಸ್ಥಾನಕ್ಕೆ 13ನೇ ವಾರ್ಡ್‌ನ ಪಾರ್ವತಮ್ಮ ದುರುಗೇಶ ದೊಡ್ಮನಿ, 32ನೇ ವಾರ್ಡ್‌ನ ಹುಲಿಗೆಮ್ಮ ನಾಗಮ್ಮ ಕಿರಿಕಿರಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಜನಾರ್ದನರೆಡ್ಡಿ ಮತ ಸೇರಿ 36 ಸದಸ್ಯರು ಮತಚಲಾಯಿಸಿದರು. ಈ ಪೈಕಿ ಬಿಜೆಪಿಯೊಂದಿಗೆ ಗುರುಸಿಕೊಂಡಿರುವ ಮೌಲಸಾಬ್ ಮತ್ತು ಪಾರ್ವತಮ ್ಮತಲಾ 28 ಮತ ಪಡೆದು ಆಯ್ಕೆಯಾದರೆ, ಎಂಟು ಮತಗಳನ್ನು ಪಡೆದ ಕಾಂಗ್ರೆಸ್‌ನ ಖಾಸೀಂಸಾಬ್ ಗದ್ವಾಲ್ ಮತ್ತು ಹುಲಿಗೆಮ್ಮ ನಾಗಮ್ಮ ಕಿರಿಕಿರಿ ಪರಾಭವಗೊಂಡರು.
ಅಭಿವೃದ್ಧಿ ಹಿತದೃಷ್ಟಿಯಿಂದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಜಾತಿ, ಮತ, ವರ್ಗ ನೋಡಿಲ್ಲ. ಬಿಜೆಪಿ ಬೆಂಬಲಿಸಿದವರನ್ನೆ ಆಯ್ಕೆ ಮಾಡಿದ್ದು, ಕಾನೂನು ರೀತ್ಯ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.ಗಾಲಿ ಜನಾರ್ದನರೆಡ್ಡಿಶಾಸಕ ಗಂಗಾವತಿ ಶಾಸಕರು ಮತ್ತು ಬಿಜೆಪಿ ಮುಖಂಡರ ಬೆಂಬಲದಿಂದ ಅಧಿಕಾರ ಸಿಕ್ಕಿದ್ದು, ಸಿಕ್ಕ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕೈಗೊಳ್ಳಲಾಗುವುದು.ಮೌಲಸಾಬ್ ದಾದೇಸಾಬ್ಅಧ್ಯಕ್ಷ ನಗರಸಭೆ