

ಗಂಗಾವತಿ: ದರೋಜಿ-ಬಾಗಲಕೋಟೆ ಸಂಪರ್ಕ ರೈಲ್ವೆ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತಿದ್ದು, ಜಿಲ್ಲೆಯ ಜನಪ್ರತಿನಿಧಿಗಳ ನೆರವಿನೊಂದಿಗೆ ಸಾಕಾರಗೊಳಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ರೈಲ್ವೆ ನಿಲ್ದಾಣದ ವ್ಯವಸ್ಥೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ದರೋಜಿ ಬಾಗಲಕೋಟೆ ಸಂಪರ್ಕ ರೈಲ್ವೆ ಯೋಜನೆಯ ಸಮೀಕ್ಷೆ ಕಾರ್ಯ ನಡೆದಿದ್ದು, ಇದರಿಂದ ಕನಕಗಿರಿ, ಕುಷ್ಟಗಿ, ಹುನಗುಂದ ಭಾಗದ ಜನರಿಗೆ ಅನುಕೂಲವಾಗಲಿದೆ.
ವಾಣಿಜ್ಯ, ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಿ, ಯೋಜನೆಗಾಗಿ ಅನುದಾನ ಬಿಡುಗಡೆಗೊಳಿಸುತ್ತೇನೆ. ಅಂಜನಾದ್ರಿ ಮತ್ತು ತಿರುಪತಿ ಕ್ಷೇತ್ರದ ಸಂಪರ್ಕಕ್ಕೂ ಅವಕಾಶ ದೊರೆಯಲಿದೆ. ಶೀಘ್ರವೇ ರೈಲ್ವೆ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.
ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಮಾತನಾಡಿ, ಈ ಹಿಂದೆ ಗಾಲಿ ಜನಾರ್ದನರೆಡ್ಡಿ ಸಚಿವರಾಗಿದ್ದಾಗ ಯೋಜನೆಯ ಪ್ರಸ್ತಾವನೆಯಿದ್ದು, ಸರ್ವೇಗೂ ಅವಕಾಶ ಕಲ್ಪಿಸಿದ್ದರು ಎಂದರು.
ಜೈನ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಮುಂಬೈ-ಗಂಗಾವತಿ ರೈಲು ಮಾರ್ಗ ಆರಂಭ, ಬೆಂಗಳೂರು ರೈಲ್ವೆಯ ವೇಳಾಪಟ್ಟಿ ಬದಲಾವಣೆ, ರೈಲ್ವೆ ನಿಲ್ದಾಣದಲ್ಲಿ ಸ್ವಯಂ ಚಾಲಿತ ಎಕ್ಸಲೇಟರ್, ರೈಲ್ವೆ ನಿಲ್ದಾಣದಕ್ಕೆ ಕಿಷ್ಕಿಂಧಾ ಎಂದು ನಾಮಕರಣ ಮಾಡುವುದು ಮತ್ತು ಅಯೋಧ್ಯೆ-ಅಂಜನಾದ್ರಿ ಹೊಸ ರೈಲ್ವೆ ಮಾರ್ಗ ಆರಂಭಿಸುವಂತೆ ಒತ್ತಾಯಿಸಿದರು.
ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ ಬಲ್ಕುಂದಿ, ಕಾಂಗ್ರೆಸ್ ಮುಖಂಡರಾದ ಅನ್ನಪೂರ್ಣ ಸಿಂಗ್, ರಾಜಶೇಖರ್ ಮುಷ್ಟೂರು, ವೀರನಗೌಡ, ಕನಕಗಿರಿ ರೈಲು ಹೋರಾಟ ಸಮಿತಿ ಪದಾಧಿಕಾರಿಗಳಾದ ಕೆ.ಚನ್ನಬಸವಸ್ವಾಮಿ, ದುರ್ಗಾದಾಸ್, ಟ್ರಸ್ಟ್ ಮಹಾವೀರ ಜೈನ್, ಬಾಬುಲಾಲ್ ಬಾಂಠಿಯಾ ಇತರರಿದ್ದರು.