

ಗಂಗಾವತಿ: ಮಹಿಳಾ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತಿದ್ದು, ಗಾರ್ಮೆಂಟ್ ಉದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ವಿಶ್ವಭಾರತಿ ಕಲಾನಿಕೇತನ ಸಂಸ್ಥೆಯಿಂದ ಆರಂಭಿಸಿರುವ ಜೀನ್ಸ್ ಹೊಲಿಗೆ ಉಚಿತ ತರಬೇತಿ ಘಟಕಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮಹಿಳೆಯರಿಗಾಗಿ ಗಾರ್ಮೆಂಟ್ ಉದ್ಯಮ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ತರಬೇತಿ ನಂತರ ಉದ್ಯಮ ವಿಸ್ತರಿಸುವ ಉದ್ದೇಶವಿದೆ. ಮಹಿಳೆಯರು ಸ್ವಾವಲಂಬಿಗಳಾಗುವ ಮೂಲಕ ಕುಟುಂಬ ನಿರ್ವಹಿಸಿಕೊಳ್ಳಬೇಕು. ಉದ್ಯೋಗ ಸೃಷ್ಟಿಯ ಜತೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸಂಸ್ಥೆಯ ಉದ್ದೇಶವಾಗಿದ್ದು, ಘಟಕದಲ್ಲಿ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿ ಪೂರಕ ಯೋಜನೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ವಿವಿಧ ಇಲಾಖೆಯಡಿಯಲ್ಲಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಉಪಾಧ್ಯಕ್ಷ ಪಾರ್ವತಿ ದುರುಗೇಶ ದೊಡ್ಮನಿ, ಸದಸ್ಯರಾದ ಅಜಯ್ ಬಿಚ್ಚಾಲಿ, ನೀಲಕಂಠಪ್ಪ ಕಟ್ಟಿಮನಿ, ಸೋಮನಾಥ ಭಂಡಾರಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಮುಖಂಡರಾದ ಮನೋಹರಗೌಡ ಹೇರೂರು, ಡಿ.ಕೆ.ಆಗೋಲಿ, ಜುಬೇರ್, ರಾಜೇಶ್ವರಿ ಸುರೇಶ, ಭಾರತಿ ಅಗಲೂರು, ಕವಿತಾ, ಚನ್ನವೀರನಗೌಡ, ವೀರೇಶ ಬಲ್ಕುಂದಿ ಇತರರಿದ್ದರು.