

ಗಂಗಾವತಿ: ಮನೆಯ ಹಬ್ಬದ ಸಂಭ್ರಮದಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಆಚರಿಸಬೇಕಿದೆ. ಪ್ರತಿಯೊಬ್ಬರ ಕನ್ನಡಾಭಿಮಾನಿ ಪಾಲ್ಗೊಳ್ಳಬೇಕು ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಕಸಾಪ ಭವನದಲ್ಲಿ ಕಸಾಪ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಮಾ.27, 28ರಂದು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಆಹ್ವಾನ ಪತ್ರಿಕೆ, ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪಗಳಿದ್ದರೆ ಎಲ್ಲವನ್ನು ಸರಿಪಡಿಸಿಕೊಂಡು ಹೋಗಬೇಕಿದ್ದು, ಅಸಮಾಧಾನ ಬೇಡ. ಸಮ್ಮೇಳನದ ಯಶಸ್ಸಿಗಾಗಿ ಪ್ರತಿಯೊಬ್ಬರನ್ನು ಒಗ್ಗೂಡಿಸಿಕೊಂಡು ಹೋಗಲಾಗುತ್ತಿದೆ. ಎರಡು ದಿನಗಳ ಸಮ್ಮೇಳನ ಜನರಿಗೆ ಉತ್ತಮ ಸಂದೇಶ ನೀಡಲಿದ್ದು, ಉಪಯುಕ್ತ ಗೋಷ್ಟಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಾಧಕರು ಮತ್ತು ಚಿತ್ರನಟರನ್ನು ಕರೆಯಿಸುವ ಉದ್ದೇಶವಿದೆ. ಇನ್ನೆರೆಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿ, ಭವ್ಯವಾದ ವೇದಿಕೆ ಹಾಕಲಾಗುತ್ತಿದ್ದು, 15 ಮಹಾದ್ವಾರಗಳ ನಿರ್ಮಾಣವಾಗಲಿದೆ. ಮಾರಾಟ ಮತ್ತು ಪ್ರದರ್ಶನಕ್ಕಾಗಿ 50 ಮಳಿಗೆ ವ್ಯವಸ್ಥೆಯಿದೆ. ಅವಸರದಲ್ಲಿ ಸಮ್ಮೇಳನ ಆಯೋಜಿಸಿದ್ದರಿಂದ ಸಣ್ಣಪುಟ್ಟ ತಪ್ಪುಗಳ ಸಹಜ. ಕೆಲವೊಮ್ಮೆ ಪ್ರಾತಿನಿಧ್ಯ ನೀಡುವಲ್ಲಿ ಲೋಪವಾಗಿರಬಹುದು. ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಸಮ್ಮೇಳನದ ಯಶಸ್ವಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಲಿಂಗಾರೆಡ್ಡಿ ವೀ.ಆಲೂರುನ್ನು ಅಧಿಕೃತ ಆಹ್ವಾನ ನೀಡಲಾಯಿತು. ನಗರಸಭೆ ಅಧ್ಯಕ್ಷ ಮೌಲಸಾಬ್‌ದಾದೇಸಾಬ್, ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲ್ಕರ್ಣಿ, ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್, ಪದಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಎಂ.ಜೆ.ಶ್ರೀನಿವಾಸ, ವೀರೇಶ ಬಲ್ಕುಂದಿ, ಶ್ರೀನಿವಾಸ ಅಂಗಡಿ, ಮನೋಹರಗೌಡ ಹೇರೂರು, ಪಂಪಣ್ಣನಾಯಕ, ವೀರಮಹೇಶ್ವರಿ, ಶ್ರೀದೇವಿ ಕೃಷ್ಣಪ್ಪ ಇತರರಿದ್ದರು.
ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು..
ಆಹ್ವಾನ ಪತ್ರಿಕೆಯಲ್ಲಿ ಕನ್ನಡ ಪರ ಸಂಘಟನೆಗಳಿಗೆ ಸೂಕ್ತ ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದ್ದು, ಕೆಲವರ ಹೆಸರನ್ನು ಮೂರ‌್ನಾಲ್ಕು ಬಾರಿ ಬಳಸಿದ್ದಾರೆ. ಎಲ್ಲರನ್ನು ಸಮಾಧಾನಗೊಳಿಸಲೆತ್ನಿಸಿ, ಆಹ್ವಾನ ಪತ್ರಿಕೆಯನ್ನು ಮತದಾರರ ಪಟ್ಟಿಯಂತೆ ರೂಪಿಸಲಾಗಿದೆ. ಸಕ್ರಿಯರಲ್ಲದವರಿಗೆ ಪ್ರಾತಿನಿಧ್ಯ ನೀಡಿ, ಕೆಲ ಆಸಕ್ತರನ್ನು ಕೈಬಿಡಲಾಗಿದೆ. ಲೋಪ ಸರಿಪಡಿಸಲು ಮರು ಮುದ್ರಣಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚಿಸಿದ್ದು, ಹಿರಿಯರು ಮತ್ತು ಅರ್ಹರಿಗೆ ಮನ್ನಣೆ ನೀಡುವಂತೆ ಕಸಾಪ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಬಿಡುಗಡೆಯ ಆಹ್ವಾನ ಪತ್ರಿಕೆ ತಡೆಹಿಡಿದಿದ್ದು, ಹೊಸ ಆಹ್ವಾನ ಪತ್ರಿಕೆ ವಿತರಿಸಲು ಕಸಾಪ ನಿರ್ಧರಿಸಿದೆ. ಮುದ್ರಣ ಎಡವಟ್ಟಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಕಸಾಪ ಹೆಸರು ಕೆಡಿಸುವ ಉದ್ದೇಶ ಎಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಮನಸ್ಸುಗಳ ಒಂದಾಗಿ ಸಮ್ಮೇಳನ ಯಶಸ್ವಿಗೊಳಿಸಬೇಕಿದೆ. ಈ ಬಗ್ಗೆ ಯಾರಲ್ಲೂ ಅಸಮಾಧಾನ ಬೇಡ. ಆಹ್ವಾನ ಪತ್ರಿಕೆಯಲ್ಲಿ ಲೋಪವಾಗಿದ್ದರೆ, ಮರು ಮುದ್ರಿಸುವಂತೆ ಸೂಚಿಸಲಾಗಿದೆ.ಒಗ್ಗಟ್ಟಿನಿಂದ ಕನ್ನಡ ತಾಯಿ ಸೇವೆ ಮಾಡೋಣ.
ಗಾಲಿ ಜನಾರ್ದನರೆಡ್ಡಿ
ಶಾಸಕ ಗಂಗಾವತಿ