

ಗಂಗಾವತಿ: ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ನಡುವಿನ ವೈಮನಸ್ಸನ್ನು ನಾಯಕ ಸಮಾಜಕ್ಕೆ ತಳಕುಹಾಕುವುದು ಸರಿಯಲ್ಲ ಎಂದು ವಾಲ್ಮೀಕಿ ನಾಯಕ ಮಹಾಸಭಾದ ಯುವ ಮುಖಂಡ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಮಾಜಿ ಅಧ್ಯಕ್ಷ ಯಮನೂರ ಚೌಡ್ಕಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಬ್ಬರ ಮುಖಂಡರ ನಡುವಿನ ಆಂತರಿಕ ವೈಮನಸ್ಸು ಮತ್ತು ವ್ಯತ್ಯಾಸವನ್ನು ಪಕ್ಷ ಅಥವಾ ಸಮುದಾಯಕ್ಕೆ ಅಂಟಿಸುವುದು ಒಳ್ಳೆಯದಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ವಿರೋಧಿಸಿದವರೇ ಮಾಜಿ ಸಚಿವ ಬಿ.ಶ್ರೀರಾಮುಲು ಪರ ನಿಂತಿದ್ದು, ರಾಜಕೀಯ ಪ್ರೇರಿತರಾಗಿ ಹೇಳಿಕೆ ನೀಡುತ್ತಿದ್ದು ಸಮಾಜದ ಒಳಿತಿಗಾಗಲ್ಲ. ರೆಡ್ಡಿಯಿಂದಲೇ ಬಿ.ಶ್ರೀರಾಮುಲು ಬೆಳೆದಿರುವ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ನಾನು ಬೆಳೆದಿಲ್ಲ ಎಂದು ರಾಮುಲು ಅವರು ಹುಲಿಗಿ ಮತ್ತು ಧರ್ಮಸ್ಥಳ ದೇವಾಲಯದಲ್ಲಿ ಅಣೆ ಪ್ರಮಾಣ ಮಾಡಲಿ. ಇಬ್ಬರ ಮುಖಂಡರ ನಡುವಿನ ಜಗಳ ಸಮಾಜಕ್ಕೆ ಸಂಬಂಧಿಸಿದ್ದಲ್ಲ ಮತ್ತು ರಾಮುಲುರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಿ ಹೇಳಿಕೆ ನೀಡುವುದನ್ನು ಮುಖಂಡರು ನಿಲ್ಲಿಸಲಿ ಎಂದರು.
ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಕ್ಷೇತ್ರದ ಪಂಪಾಸರೋವರ ದೇವಾಲಯ ಜೀರ್ಣೋದ್ಧಾರಕ್ಕಾಗಿ ಬಂದಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಪರ ನಿಲ್ಲದ, ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ರೆಡ್ಡಿ ಮತ್ತು ರಾಮುಲು ಜಗಳ ಸಂದರ್ಭದಲ್ಲಿ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ರಾಮುಲು ಬಗ್ಗೆ ಶಾಸಕ ರೆಡ್ಡಿ ಅವಹೇಳನಕಾರಿ ರೀತಿಯಲ್ಲಿ ಹೇಳಿಕೆ ನೀಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಇಬ್ಬರು ನಾಯಕರು ಪುನಹ ಒಂದಾಗಲಿದ್ದು, ಅನಗತ್ಯ ಹೇಳಿಕೆ ನೀಡುವುದನ್ನು ಸಮಾಜದ ಮುಖಂಡರು ಬಿಡಲಿ ಎಂದರು.
ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ದುರುಗಪ್ಪ ನಾಯಕ, ಅರ್ಜುನನಾಯಕ, ರಾಮಣ್ಣ ಹಾದಿಮನಿ, ಎಂ.ಸುರೇಶ ಇತರರಿದ್ದರು.