ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಅಭಿವೃದ್ಧಿಗೆ ಪೂರಕ

DHARMIKA
ಗಂಗಾವತಿಯಲ್ಲಿ ಹಿರಿಯ ಸಂಘಟಕ ಜಿ.ಶಿವಲಿಂಗಪ್ಪನವರ ಬಸವಾನುಯಾಯಿ ಅಭಿನಂದನಾ ಗ್ರಂಥವನ್ನು ಜಾನಪದ ತಜ್ಞ ನಾಡೋಜ ಗೊ.ರು.ಚನ್ನಬಸಪ್ಪ ಸೋಮವಾರ ಬಿಡುಗಡೆಗೊಳಿಸಿದರು. ಇಲಕಲ್ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ಸ್ವಾಮೀಜಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಇತರರಿದ್ದರು.
Published on

ಗಂಗಾವತಿ: ಸಾಂಸ್ಕೃತಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರದ ನಿರೀಕ್ಷಿತ ಅಭಿವೃದ್ಧಿ ಸಾಬೀತಾಗಲಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ಹೆಚ್ಚಾಗಬೇಕಿದೆ ಎಂದು ಜಾನಪದ ತಜ್ಞ ನಾಡೋಜ ಗೊ.ರು. ಚನ್ನಬಸಪ್ಪ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕ, ಉಮಾ ಪ್ರಕಾಶನ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಿರಿಯ ಸಂಘಟಕ ಜಿ.ಶಿವಲಿಂಗಪ್ಪನವರ ಬಸವಾನುಯಾಯಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಸಾಂಸ್ಕೃತಿಕ ಬದುಕು ಉನ್ನತ ಮಟ್ಟಕ್ಕೇರಿಸಲಿದ್ದು, ಕ್ರೀಯಾಶೀಲತೆ ಸಾಧನೆಗೆ ಸಾಕ್ಷಿಯಾಗಲಿದೆ. ಬದುಕಿನ ಹಿನ್ನೋಟಗಳು ಅಕ್ಷರ ರೂಪಕ್ಕಿಳಿಯಬೇಕಾದರೆ, ಸಮಾಜದಲ್ಲಿ ಕೈಗೊಂಡ ಪರೋಪಕಾರ ಚಟುವಟಿಕೆಗಳೇ ಕಾರಣ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಅಭಿವೃದ್ಧಿಗೆ ಪೂರಕ ಎಂದರು.

ರಾಷ್ಟ್ರೀಯ ನಾಟಕ ಶಾಲೆ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ಮಕ್ಕಳಿಗೆ ಆರಂಭದಲ್ಲಿ ಜಾತಿ ಸೂಚಕ ಪದಗಳ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಅಧ್ಯತ್ಮ ಮತ್ತು ಧರ್ಮ ಬೇಕು, ಆದರೆ ಮಾರಕವಾಗುವಂತ ಚಟುವಟಿಕೆಗಳು ಬೇಡ. ನಡೆ, ನುಡಿ ಆಧಾರದಡಿ ಸಾಧನೆ ನಿರ್ಣಯವಾಗಲಿದ್ದು, ಸಾಧಕರ ಕಾರ್ಯ ಇತರರಿಗೆ ಪ್ರೇರಣೆಯಾಗಬೇಕಿದೆ ಎಂದರು.

ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್, ಆಶಯ ನುಡಿಗಳನ್ನಾಡಿದರು. ಇಲಕಲ್ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಡಿಸಿಸಿ ಮಾಜಿ ಅಧ್ಯಕ್ಷೆ ಲಲಿತಾರಾಣಿ ರಾಯಲು, ಸಾಹಿತಿಗಳಾದ ಸಿ.ಎಚ್.ನಾರಿನಾಳ್, ಪವನಕುಮಾರ ಗುಂಡೂರು, ಜಿ.ಶಿವಲಿಂಗಪ್ಪ, ಗ್ರಂಥ ಪ್ರಧಾನ ಸಂಪಾದಕರಾದ ಡಾ.ಎನ್.ಡಿ.ತಿಪ್ಪೇಸ್ವಾಮಿ, ಶ್ರೀದೇವಿ ಕೃಷ್ಣಪ್ಪ, ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ ಇತರರಿದ್ದರು. ಸಾಹಿತಿ ಲಿಂಗಾರೆಡ್ಡಿ ವೀ.ಆಲೂರು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net